ಚಂಡೀಗಢ: ಕೂಡು ಕುಟುಂಬ ಚಂದವೆನ್ನುತ್ತಾರೆ ಅನೇಕರು. ಆದರೆ ಅದೇ ಕೂಡು ಕುಟುಂಬದಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಜಗಳವಾಗಿ ಅದು ದೊಡ್ಡ ಕ್ರೈಂಗೇ ನಾಂದಿ ಹಾಡಿರುವ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಅಂತೆಯೇ ಮಕ್ಕಳ ವಿಚಾರಕ್ಕೆ ಆರಂಭವಾದ ಜಗಳಕ್ಕೆ ಮೈದುನನೊಬ್ಬ ಅತ್ತಿಗೆಯ ಕಥೆಯನ್ನೇ ಮುಗಿಸಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.
ಹರಿಯಾಣದ ಅಂಬಲ ನಗರದಲ್ಲಿ ಅದೊಂದು ಕೂಡು ಕುಟುಂಬ. ಅಣ್ಣ ಅನಿಲ್ ಮತ್ತು ತಮ್ಮ ಧೀರಜ್ ಇಬ್ಬರಿಗೂ ಮದುವೆಯಾಗಿ ಮಕ್ಕಳಿದ್ದರು. ಅಣ್ಣನ ಹೆಂಡತಿ ಸಪ್ನಾ(30) ಹಾಗೂ ತಮ್ಮನ ಹೆಂಡತಿ ನಡುವೆ ಆಗಾಗ ಜಗಳ ಆಗುತ್ತಿರುತ್ತಿತ್ತಂತೆ. ಮಕ್ಕಳ ವಿಚಾರಕ್ಕೆ ಜಗಳ ಆರಂಭವಾಗಿ ಅದು ನಂತರ ಇಬ್ಬರ ಗಂಡಂದಿರ ಬಳಿಯೂ ಹೋಗುತ್ತಿತ್ತಂತೆ.
ಅದೇ ರೀತಿ ಈ ಗುರುವಾರ ಕೂಡ ಮನೆಯ ಇಬ್ಬರು ಸೊಸೆಯಂದಿರ ನಡುವೆ ಜಗಳವಾಗಿದೆ. ಕಿರಿ ಸೊಸೆ ಈ ವಿಚಾರವಾಗಿ ಗಂಡ ಧೀರಜ್ಗೆ ದೂರು ನೀಡಿದ್ದು, ಆತ ಕೂಡ ಜಗಳದ ಮಧ್ಯೆ ಬಂದಿದ್ದಾನೆ. ಅತ್ತಿಗೆಯೊಂದಿಗೆ ವಾದಕ್ಕೆ ನಿಂತಿದ್ದಾನೆ. ಅತ್ತಿಗೆ ಮೈದುನನ ವಾದ ವಿವಾದ ತಾರಕಕ್ಕೇರಿದ್ದು, ಮನೆಯಲ್ಲಿದ್ದ ಚಾಕುವಿನಿಂದ ಧೀರಜ್ ಅತ್ತಿಗೆಗೆ ಇರಿದಿದ್ದಾನೆ.
ಹೆಂಡತಿಗೆ ತಮ್ಮ ಚಾಕುವಿನಿಂದ ಇರಿದಿದ್ದನ್ನು ಕಂಡು ಭಯಗೊಂಡ ಅನಿಲ್ ತಕ್ಷಣ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ. ಈ ವಿಚಾರವಾಗಿ ಅನಿಲ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ತಮ್ಮನ ವಿರುದ್ಧ ದೂರು ನೀಡಿದ್ದಾನೆ. ನನ್ನ ಹೆಂಡತಿಯ ಸಾವಿಗೆ ಅವನೇ ಕಾರಣ ಎಂದು ಕಣ್ಣೀರಿಟ್ಟಿದ್ದಾನೆ. ಸದ್ಯ ಧೀರಜ್ ಮತ್ತು ಆತನ ಹೆಂಡತಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)