ಬೆಂಗಳೂರು: ಪುನೀತ್ ರಾಜ್ಕುಮಾರ್ ಅವರ ಅಂತ್ಯಕ್ರಿಯೆ ಬಳಿಕ ಶಿವರಾಜ್ಕುಮಾರ್ ತುಂಬಾ ನೋವಿನಿಂದಲೇ ಮಾತನಾಡಿದ್ದಾರೆ.
ಸದಾಶಿವನಗರದ ನಿವಾಸ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಣ್ಣ, ಅಂತ್ಯ ಸಂಸ್ಕಾರದ ಬಳಿಕ ಒಂದಷ್ಟು ಪೂಜಾ ವಿಧಿ-ವಿಧಾನ ನಡೆಯಬೇಕಿದೆ. ಅದೆಲ್ಲವೂ ಮುಗಿದ ಬಳಿಕ ಅಪ್ಪು ಸಮಾಧಿ ಬಳಿ ಅಭಿಮಾನಿಗಳಿಗೆ ಹೋಗಲು ಶೀಘ್ರವೇ ವ್ಯವಸ್ಥೆ ಮಾಡಿಸುವೆ. ದಯವಿಟ್ಟು ಸಹಕರಿಸಿ ಎಂದು ಕೈಮುಗಿದು ಕೇಳಿಕೊಂಡರು. ಮಗುವಿನಿಂದ ಅಪ್ಪುವನ್ನು ನಾನು ನೋಡಿದ್ದೇನೆ. ಅಪ್ಪು ನನಗಿಂತ 13 ವರ್ಷ ಚಿಕ್ಕವನು. ಅಪ್ಪು ಇಲ್ಲ ಎಂದು ಹೇಳಲು ತುಂಬಾ ಕಷ್ಟವಾಗುತ್ತದೆ. ಅಪ್ಪು ಎಲ್ಲೋ ಊರಿಗೆ ಹೋಗಿದ್ದಾನೆ ಬರ್ತಾನೆ ಅನ್ನಿಸುತ್ತೆ. ಅಭಿಮಾನಿಗಳು ಅಳುವುದನ್ನ ನೋಡಿದಾಗ ಮತ್ತಷ್ಟು ನೋವಾಗುತ್ತದೆ, ನನ್ನ ಮಗನೇ ಹೋದಂತೆ ಭಾಸವಾಗುತ್ತೆ. ಆದರೆ ಕುಟುಂಬ ಇದೆ, ಎಲ್ಲ ಮುಂದೆ ಹೋಗಬೇಕು. ನಾನು ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ ಎನ್ನುವ ಮೂಲಕ ಪುನೀತ್ ಮಕ್ಕಳ ಜವಾಬ್ದಾರಿ ನನ್ನದು ಎಂಬ ಮಾತನ್ನ ಪರೋಕ್ಷವಾಗಿ ಹೇಳಿದರು.
ಅಪ್ಪು ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳಬಾರದು. ಅಪ್ಪು ಇಂತಹದ್ದನ್ನು ಎಂದೂ ಬಯಸಲ್ಲ. ನಮಗೂ ಅಪ್ಪು ಮೇಲೆ ಪ್ರೀತಿ ಇದೆ ಅಲ್ವಾ? ಹಾಗಾಂತ ಆತ್ಮಹತ್ಯೆ ಮಾಡಿಕೊಳ್ಳಬಾರದು. ನಿಮ್ಮ ಕುಟುಂಬಕ್ಕೆ ನಿಮ್ಮ ಅಗತ್ಯತೆ ಇದೆ, ಅರ್ಥ ಮಾಡಿಕೊಳ್ಳಿ. ಅಪ್ಪಾಜಿ ನಿಧನದ ಸಮಯದಲ್ಲಿ ತುಂಬಾ ಕಷ್ಟವಾಗಿತ್ತು. ಈಗ ಎಲ್ಲವನ್ನೂ ನಿಭಾಯಿಸಿದ್ದೇವೆ. ಅಭಿಮಾನಿಗಳ ಪ್ರೀತಿಗೆ ಋಣಿಯಾಗಿದ್ದೇವೆ. ಎಲ್ಲರಿಗಿಂತ ಹೆಚ್ಚಾಗಿ ಅಪ್ಪು ನಿಮ್ಮ ಹೃದಯದಲ್ಲಿ ಇದ್ದಾನೆ. ಅಪ್ಪು ತುಂಬಾ ಚಿಕ್ಕವನು, ಭಗವಂತನಿಗೆ ಅಪ್ಪು ಇಷ್ಟವಾಗಿಬಿಟ್ಟ ಎನ್ನುತ್ತಲೇ ಶಿವಣ್ಣ ಕಣ್ಣೀರಿಟ್ಟರು.
ಪುನೀತ್ರನ್ನು ಶಾಂತಿಯುತವಾಗಿ ಕಳುಹಿಸಿ ಕೊಡಲು ರಾಜ್ಯ ಸರ್ಕಾರ ತುಂಬಾ ಸಹಕಾರ ನೀಡಿದೆ. ಸಿಎಂ ಬೊಮ್ಮಾಯಿ ಅವರಿಗೆ ಧನ್ಯವಾದ ಸಲ್ಲಿಸುವೆ. ಪೊಲೀಸ್ ಪಡೆ ಅಚ್ಚುಕಟ್ಟಾಗಿ ಬಂದೋಬಸ್ತ್ ಮಾಡಿತ್ತು. ಅವರಿಗೂ ಧನ್ಯವಾದ. ಮೂರು ದಿನಕ್ಕೆ ಅಪ್ಪುಗೆ ಹಾಲು-ತುಪ್ಪ ಬಿಡಬೇಕಿತ್ತು. ಆದರೆ ಮೂರನೇ ದಿನ ಅಂತ್ಯಸಂಸ್ಕಾರ ಆಗಿದ್ದರಿಂದ 5ನೇ ದಿನವಾದ ಮಂಗಳವಾರ ಹಾಲು-ತುಪ್ಪ ಬಿಡುವ ಕಾರ್ಯ ನಡೆಯಲಿದೆ. ದಯವಿಟ್ಟು ಅಭಿಮಾನಿಗಳು ಸಹಕರಿಸಬೇಕು. ಈ ಕಾರ್ಯಗಳು ಮುಗಿದ ಬಳಿಕ ಅಭಿಮಾನಿಗಳಿಗೂ ಸಮಾಧಿ ಬಳಿ ಬರಲು ಅವಕಾಶ ಕಲ್ಪಿಸಲು ವ್ಯವಸ್ಥೆ ಮಾಡುತ್ತೇವೆ ಎಂದು ಮನವಿ ಮಾಡಿದರು.