ನ್ಯೂಸ್

ಇಂದು ಪುನೀತ್​-ಅಶ್ವಿನಿ ವಿವಾಹ ವಾರ್ಷಿಕೋತ್ಸವ: ಅಪ್ಪು ಇಲ್ಲದೆ ಮನೆ-ಮನ ಎರಡೂ ಮಂಕಾಗಿದೆ...

ಬೆಂಗಳೂರು: ನಟ ಪುನೀತ್​ ರಾಜ್​ಕುಮಾರ್​ ಮತ್ತು ಅಶ್ವಿನಿ ಅವರು ಮದುವೆ ಆಗಿ ಇಂದಿಗೆ 22 ವರ್ಷ. ಪುನೀತ್​ ಬದುಕಿದ್ದರೆ ಮನೆಯಲ್ಲಿ ವಿವಾಹ ವಾರ್ಷಿಕೋತ್ಸವದ ಸಂಭ್ರಮ ಕಳೆಗಟ್ಟುತ್ತಲಿತ್ತು. ಆದರೆ, ಅಪ್ಪು ಬಾರದಲೋಕಕ್ಕೆ ಹೋಗಿದ್ದು, ಅಶ್ವಿನಿ ಮತ್ತು ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟಿದೆ.

ಅಪ್ಪು ಅಭಿಮಾನಿಗಳು ನೋವಿನಲ್ಲೇ ಅಶ್ವಿನಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಕೋರಿದ್ದಾರೆ. 'ಅಶ್ವಿನಿ ಅಕ್ಕ, ಅಶ್ವಿನಿ ಅತ್ತಿಗೆ' ಎಂದು ಕರೆಯುತ್ತಿರುವ ಅಭಿಮಾನಿಗಳು 'ಅಪ್ಪು ಸರ್​ ಅವರು ಇರಬೇಕಿತ್ತು. ನಿಮ್ಮ ನೋವನ್ನು ನಮಗೆ ಊಹಿಸಿಕೊಳ್ಳೋಕು ಕಷ್ಟ ಆಗ್ತಿದೆ. ಧೈರ್ಯವಾಗಿರಿ' ಎನ್ನುತ್ತಾ ವಿವಾಹ ವಾರ್ಷಿಕೋತ್ಸವದ ಶುಭಾಶಯ ತಿಳಿಸಿದ್ದಾರೆ.

ನಮಗೆಲ್ಲಾ ಗೊತ್ತಿರುವಂತೆ ಪುನೀತ್​ ರಾಜ್​ಕುಮಾರ್​ ಮತ್ತು ಚಿಕ್ಕಮಗಳೂರಿನ ಅಶ್ವಿನಿ ಅವರದ್ದು ಲವ್​ ಕಮ್​ ಅರೇಂಜ್ಡ್​ ಮದುವೆ. ಗೆಳೆಯರ ಮೂಲಕ ಒಬ್ಬರಿಗೊಬ್ಬರ ಪರಿಚಯ ಆಗಿತ್ತು. ಸ್ನೇಹ ಪ್ರೀತಿಗೆ ತಿರುಗಿ ಎರಡೂ ಕುಟುಂಬಸ್ಥರ ಸಮ್ಮುಖದಲ್ಲಿ 1999ರ ಡಿಸೆಂಬರ್​ 1ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಮುದ್ದಾದ ದಂಪತಿಗೆ ಧ್ರುತಿ ಮತ್ತು ವಂದಿತಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅಪ್ಪುಗೆ ಪತ್ನಿ ಅಶ್ವಿನಿ ಅವರನ್ನ ಕಂಡರೆ ತುಂಬಾ ಪ್ರೀತಿ, ಗೌರವ ಇತ್ತು. ಅಶ್ವಿನಿ ಅವರಿಗೂ ಅಷ್ಟೇ ಪುನೀತ್​ ಅವರೇ ಬದುಕು. ಆದರೀಗ ಅಪ್ಪು ಇಲ್ಲದೆ ಮನೆ-ಮನ ಎರಡೂ ಮಂಕಾಗಿದೆ.

ಫ್ಯಾಮಿಲಿ ಮನ್​ ಆಗಿಯೇ ಗುರುತಿಸಿಕೊಂಡಿದ್ದ ಪುನೀತ್​, ಕುಟುಂಬಸ್ಥರು ಕೂತು ನೋಡುವಂತಹ ಸಿನಿಮಾಗಳನ್ನೇ ಮಾಡುತ್ತಿದ್ದರು. ಅಭಿನಯ, ಸರಳತೆ ಮೂಲಕವೇ ಅಪ್ಪು ಕರುನಾಡಿನ ಮನೆ ಮಗ ಆಗಿಬಿಟ್ಟಿದ್ದರು.