ನರಗುಂದ: ಆತ ಹುಟ್ಟಿನಿಂದಲೂ ಮಾತು ಬಾರದ, ಕಿವಿಯೂ ಕೇಳದ ಮೂಕಹಕ್ಕಿ. ಈ ಹಕ್ಕಿಯ ಹೃದಯರಾಗಕ್ಕೆ ಪಲ್ಲವಿಯಾಗಿ ಬಂದಿದ್ದಾಳೆ ಪದವೀಧರೆ!
ಗದಗ ಜಿಲ್ಲೆ ನರಗುಂದ ಪಟ್ಟಣದ ದಂಡಾಪೂರ ಬಡಾವಣೆಯ ಲಾಲಮಹ್ಮದ್-ಆರೀಫಾಬಾನು ದಂಪತಿ ಪುತ್ರ ಮಹ್ಮದ್ ಸಾದಿಕ್(25) ಹಾಗೂ ಗದಗಿನ ಗಂಗಿಮಡಿ ಬಡಾವಣೆಯ ಮಲಿಕ್ಸಾಬ್-ಮಮತಾಜಬೇಗಂ ಪಲ್ಲೇದ ದಂಪತಿಯ ಸುಪುತ್ರಿ ಸುಮಯ್ಯಾ(22) ನವ ಜೀವನಕ್ಕೆ ಕಾಲಿಟ್ಟಿದ್ದು, ಈ ಜೋಡಿಗೆ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ. ಮಾತೂ ಬಾರದ, ಕಿವಿಯೂ ಕೇಳ ಯುವಕನನ್ನು ವರಿಸುವ ಮೂಲಕ ಆತನ ಬಾಳಿಗೆ ಬೆಳಕಾದ ಯುವತಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ನರಗುಂದದ ವರ ಮಹ್ಮದ್ ಸಾದಿಕ್ಗೆ ಹುಟ್ಟಿನಿಂದಲೇ ಮಾತು ಬರುವುದಿಲ್ಲ. ಕಿವಿಯೂ ಕೇಳಿಸುವುದಿಲ್ಲ. ಆದರೇನಂತೆ ಒಳ್ಳೆಯ ಮನಸ್ಸಿದ್ದರೆ ಸಾಕು ಎಂದ ಸುಮಯ್ಯಾ, ತನ್ನ ಸ್ವಗೃಹ ಗದಗಿನ ಗಂಗಿಮಡಿ ನಿವಾಸದಲ್ಲಿ ಮುಸ್ಲಿಂ ಧರ್ಮದ ಸಂಪ್ರದಾಯದಂತೆ ಭಾನುವಾರ ಸರಳವಾಗಿ ಮದುವೆಯಾದರು. ಸೋಮವಾರ ನರಗುಂದದಲ್ಲಿ ಏರ್ಪಾಟಾಗಿದ್ದ ವಲೀಮಾ ಕಾರ್ಯಕ್ರಮಕ್ಕೆ ನೆಂಟರು, ಕುಟುಂಬದವರು, ಸ್ನೇಹಿತರು ಬಂದು ಶುಭ ಹಾರೈಸಿದರು. ಈ ನವ ಜೋಡಿಗಳ ಮದುವೆಯಲ್ಲಿ ವರನ ಕಡೆಯ ಮೂಕ ಮತ್ತು ಕಿವುಡ ಸ್ನೇಹಿತರು ಆಗಮಿಸಿ ಹೃದಯ ಪೂರ್ವಕ ಶುಭ ಕೋರಿದ ದೃಶ್ಯ ನೋಡುಗರನ್ನು ಭಾವುಕರನ್ನಾಗಿಸಿತು.
ಮಹ್ಮದ್ ಸಾದಿಕ್ ನರೇಗಲ್ಲನ ಶ್ರೀ ಅನ್ನದಾನೇಶ್ವರ ಕಿವುಡ ಮತ್ತು ಮೂಕರ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪೊರೈಸಿದ್ದಾರೆ. ನಂತರ ಮೈಸೂರಿನ ಜೆಎಸ್ಎಸ್ ಕಾಲೇಜ್ನಲ್ಲಿ ಪಿಯುಸಿ ಮುಗಿಸಿ, ಆಟೋ ಇಲೆಕ್ಟ್ರಿಷಿಯನ್ ಆಗಿ ಸ್ವಂತ ಉದ್ಯೋಗದಲ್ಲಿದ್ದಾರೆ. ವರನಿಗೆ ದೂರದ ಸಂಬಂಧಿಯಾಗಿರುವ ವಧು ಸುಮಯ್ಯಾ ನರಗುಂದದ ಶ್ರೀ ಶಾರದಾಂಬಾ ಶಾಲೆಯಲ್ಲಿ 1 ರಿಂದ 10ನೇ ತರಗತಿ ಪೊರೈಸಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಲಾ ಶಿಕ್ಷಣ, ಶ್ರೀ ಸಿದ್ಧೇಶ್ವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ. ಎರಡೂ ಕುಟುಂಬದವರ ಒಪ್ಪಿಗೆ ಮೇರೆಗೆ ವಿವಾಹ ಕಾರ್ಯಕ್ರಮ ನೆರವೇರಿದೆ.
ಅಜ್ಞಾನ ಮತ್ತು ಸುಜ್ಞಾನ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಮ್ಮ ಮನಸ್ಸಿನ ಅಜ್ಞಾನವೆಂಬ ಒಳಗತ್ತಲನ್ನು ಹೊಡೆದೋಡಿಸಿ, ಜ್ಞಾನದ ಬೆಳಕನ್ನು ಆಹ್ವಾನಿಸಿಕೊಳ್ಳಬೇಕಾದರೆ ಜ್ಞಾನದ ಬೆಳಕುಳ್ಳ ಕಂದೀಲು ಸದಾ ಕಾಲವೂ ಬೆಳಗುತ್ತಿರಬೇಕು. ಯಾರಲ್ಲಿ ಜ್ಞಾನದ ಬೆಳಕು ಪ್ರಜ್ವಲಿಸುತ್ತದೆಯೋ ಅವರಲ್ಲಿ ಸಂಕುಚಿತ ಪ್ರವೃತ್ತಿ, ಅನಾದರ, ತಮಸ್ಸು ಇರುವುದಿಲ್ಲ. ಇದಕ್ಕೆ ತಾಜಾ ಉದಾಹರಣೆ ಈ ಜೋಡಿಯಾಗಿದೆ.
| ರೆಹಮಾನ್ ಅರಬಜಮಾದಾರ ವರನ ಚಿಕ್ಕಪ್ಪ
ಮಾತು ಬಾರದೆ, ಕಿವಿ ಕೇಳದೆ ಇದ್ದರೂ ದೇವರ ಸದಿಚ್ಛೆಯಂತೆ ನಮ್ಮ ಮಗಳಿಗೆ ಸುಂದರವಾದ, ಸ್ವಂತ ಉದ್ಯೋಗ ಮಾಡಿಕೊಂಡಿರುವ ವರ ಸಿಕ್ಕಿದ್ದಾನೆ. ಗುರು, ಹಿರಿಯರ ಆಶೀರ್ವಾದದಿಂದ ಸಮಾಜಕ್ಕೆ ಮಾದರಿಯಾಗುವಂತೆ ಇವರಿಬ್ಬರೂ ಜೀವನ ನಡೆಸಿದರೆ ಸಾಕು. ಮತ್ತೇನನ್ನೂ ನಮ್ಮ ಕುಟುಂಬ ನೀರಿಕ್ಷಿಸುವುದಿಲ್ಲ.
| ಮಲಿಕ್ಸಾಬ್ ಪಲ್ಲೇದ ವಧುವಿನ ತಂದೆ