ನ್ಯೂಸ್

ಚಾಮರಾಜನಗರ ಆಕ್ಸಿಜನ್​ ದುರಂತ: ರೋಹಿಣಿ ಸಿಂಧೂರಿ ಸೇಫ್​​, ಕೊನೆಗೂ ಆ ದಿನದ ರಹಸ್ಯ ಬಿಚ್ಚಿಟ್ಟ ಸಮಿತಿ

ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ಆಕ್ಸಿಜನ್​ ಕೊರತೆಯಿಂದ 20ಕ್ಕೂ ಹೆಚ್ಚು ಕರೊನಾ ಸೋಂಕಿತರು ಮೃತಪಟ್ಟ ಘಟನೆ ಇಡೀ ದೇಶಾದ್ಯಂತ ಭಾರಿ ಸದ್ದು ಮಾಡಿತ್ತು. ಇದಕ್ಕೆಲ್ಲ ಕಾರಣ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಎಂದು ಕೆಲ ಜನಪ್ರತಿನಿಧಿಗಳು ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದರು.

ಎರಡೂ ಜಿಲ್ಲಾಡಳಿತಗಳ ನಡವಿನ ಸಮನ್ವಯ, ಸಂವಹನದ ಕೊರತೆಯಿಂದಲೇ ಅಮಾಯಕರ ಜೀವಗಳು ಬಲಿಯಾಗಬೇಕಾಯಿತು ಎಂಬ ಮಾತುಗಳು ದಟ್ಟವಾಗಿ ಕೇಳಿಬಂದಿದ್ದವು. ಚಾಮರಾಜನಗರ ಜಿಲ್ಲಾಸ್ಪತ್ರೆಗೆ ತುರ್ತು ವೇಳೆ ಮೈಸೂರು ಜಿಲ್ಲಾಡಳಿತ ಸೂಕ್ತ ಸ್ಪಂದನೆ ನೀಡಲಿಲ್ಲ. ಘಟನೆ ನಡೆದ ದಿನ ಅಂದರೆ ಮೇ 2ರ ಸಂಜೆ ವೇಳೆಗೆ ನಮಗೆ 100 ಆಕ್ಸಿಜನ್​ ಸಿಲಿಂಡರ್​ ಬೇಕಿತ್ತು. ಸಕಾಲದಲ್ಲಿ ಸಿಲಿಂಡರ್ ಪೂರೈಕೆಯಾಗಲಿಲ್ಲ ಎನ್ನುವ ಮೂಲಕ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ರೋಹಿಣಿ ಸಿಂಧೂರಿಯತ್ತ ಬೆರಳು ತೋರಿಸಿದ್ದರು. ಇದೀಗ ಆಕ್ಸಿಜನ್​ ದುರಂತಕ್ಕೆ ರೋಹಿಣಿ ಸಿಂಧೂರಿ ಕಾರಣವಲ್ಲ ಎಂಬುದು ಬಯಲಾಗಿದೆ.

ಹೌದು, ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣಕ್ಕೆ ಆಕ್ಸಿಜನ್ ಕೊರತೆಯೇ ಕಾರಣ. ಮೇ 2ರ ರಾತ್ರಿ 11 ಗಂಟೆಯಿಂದ ಮೇ 3ರ ಮಧ್ಯರಾತ್ರಿವರೆಗೆ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜ‌ನ್ ಲಭ್ಯವಿರಲಿಲ್ಲ. ಸಂದರ್ಭಕ್ಕೆ ತಕ್ಕಂತೆ ನಾಯಕತ್ವ ಮತ್ತು ಕ್ರಿಯಾಶೀಲತೆ ತೋರಿಸುವಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ವಿಫಲರಾಗಿದ್ದಾರೆ. ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಆಕ್ಸಿಜನ್ ಸಾಗಿಸಲು ಯಾವುದೇ ತಡೆವೊಡಿಲ್ಲ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲ್ ಗೌಡ ನೇತೃತ್ವದ ಕಾನೂನು‌ ಸೇವೆಗಳ ಪ್ರಾಧಿಕಾರದ ಸಮಿತಿ ಹೇಳಿದೆ. ಆ ಮೂಲಕ ರೋಹಿಣಿ ಸಿಂಧೂರಿಗೆ ಕ್ಲೀನ್​ಚಿಟ್​ ನೀಡಿದೆ.

ಈ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಸೂಚಿಸಿರುವ ಸಮಿತಿ, ಮೈಸೂರು ಜಿಲ್ಲಾಧಿಕಾರಿ ವಿರುದ್ಧ ಆರೋಪ ಸಾಬೀತು ಪಡಿಸುವ ದಾಖಲೆಗಳಿಲ್ಲ ಎಂದು ಹೇಳಿದೆ.

ಇತ್ತ ರೋಹಿಣಿ ಸಿಂಧೂರಿಗೆ ಕ್ಲೀನ್ ಚಿಟ್ ಸಿಗುತ್ತಿದ್ದಂತೆ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ರವಿ ಮೌನಕ್ಕೆ ಶರಣಾಗಿದ್ದಾರೆ. ಇಂದು ಬೆಳಗ್ಗೆಯಿಂದ ಅವರ ಮೊಬೈಲ್ ನಾಟ್ ರೀಚಬಲ್ ಆಗಿದೆ.