ನ್ಯೂಸ್

ಹೆಂಡತಿಯ ಕಾಟ ತಾಳಲಾರದೆ ಮಗನೊಂದಿಗೆ ಬಾವಿಗೆ ಹಾರಿದ ಪತಿ! ಮಲತಾಯಿ ಧೋರಣೆಗೆ ಬಾಲಕ ಬಲಿ

ಮುಂಬೈ: ಮೊದಲ ಹೆಂಡತಿಗೆ ಹುಟ್ಟಿದ್ದ ಮಗನನ್ನು ನೋಡಿಕೊಳ್ಳುವ ಸಲುವಾಗಿ ಎರಡನೇ ಮದುವೆಯಾದ ವ್ಯಕ್ತಿಯೊಬ್ಬ ಹೆಂಡತಿಯ ಕಾಟ ತಾಳಲಾರದೆ ಮಗನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್​ನಲ್ಲಿ ನಡೆದಿದೆ. ಮಲತಾಯೊ ಧೋರಣೆಯಿಂದಾಗಿ ಎಂಟು ವರ್ಷದ ಬಾಲಕ ಕೊನೆಯುಸಿರೆಳೆದಿದ್ದಾನೆ.

ಮುಕೇಶ್​ ಹೆಸರಿನ ವ್ಯಕ್ತಿ 10 ವರ್ಷಗಳ ಹಿಂದೆ ಸಾಕ್ಷಿಯೊಂದಿಗೆ ಮದುವೆಯಾಗಿದ್ದ. ದಂಪತಿಗಳು ಹಲವು ವರ್ಷಗಳ ಹಿಂದೆ ಬೇರಾಗಿದ್ದು, ಸಾಕ್ಷಿ ಪುಣೆಯ ವ್ಯಕ್ತಿಯೊಂದಿಗೆ ಮದುವೆಯಾಗಿದ್ದಾಳೆ. ಮಗ ಶುಭಂನನ್ನು ಮುಕೇಶ್​ ನೋಡಿಕೊಳ್ಳುತ್ತಿದ್ದ. ಮೂರು ವರ್ಷಗಳ ಹಿಂದೆ ಮುಕೇಶ್ ರಾಧಾ ಹೆಸರಿನ ಯುವತಿಯನ್ನು ಮದುವೆಯಾಗಿದ್ದಾನೆ. ರಾಧಾಗೆ ಒಂದು ವರ್ಷದ ಹಿಂದೆ ಮಗುವಾಗಿದೆ. ಅದಾದ ನಂತರ ಆಕೆ ಶುಭಂನನ್ನು ಅನಾಥಾಶ್ರಮಕ್ಕೆ ಸೇರಿಸುವಂತೆ ಗಂಡನಿಗೆ ಕಾಟ ಕೊಡಲಾರಂಭಿಸಿದ್ದಾಳೆ.

ಮನೆಯಲ್ಲಿ ಶುಭಂ ಏನೇ ತಪ್ಪು ಮಾಡಿದರೂ ಅದು ದಂಪತಿಯ ನಡುವೆ ದೊಡ್ಡ ಜಗಳಕ್ಕೆ ಕಾರಣವಾಗುತ್ತಿತ್ತು. ಅದೇ ರೀತಿ ಡಿಸೆಂಬರ್​ 25ರಂದೂ ದಂಪತಿಯ ನಡುವೆ ಜಗಳವಾಗಿದೆ. ಸಿಟ್ಟಿಗೆದ್ದ ಮುಕೇಶ್​, ಶುಭಂನೊಂದಿಗೆ ಬಾವಿಗೆ ಹಾರಿದ್ದಾನೆ. ಆದರೆ ಬಾವಿಗೆ ಬಿದ್ದ ಆತ ಹೇಗೋ ತನ್ನ ಜೀವವನ್ನು ರಕ್ಷಿಸಿಕೊಂಡಿದ್ದಾನೆ. ಈಜು ಬರದ ಶುಭಂ ಮುಳುಗಿ ಪ್ರಾಣ ಬಿಟ್ಟಿದ್ದಾನೆ. ಮುಕೇಶ್​ ದಂಪತಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. (ಏಜೆನ್ಸೀಸ್​)