ನ್ಯೂಸ್

ಪಾರ್ಟಿಯಲ್ಲಿ ಡ್ಯಾನ್ಸ್​ ಮಾಡಲು ನಿರಾಕರಿಸಿದ ಯುವತಿಯರ ಮೇಲೆ ಸಾಮೂಹಿಕ ಅತ್ಯಾಚಾರ

Webdesk - Manjunatha B

ಲಖನೌ: ಬರ್ತ್​ಡೇ ಪಾರ್ಟಿಯಲ್ಲಿ ಡ್ಯಾನ್ಸ್​ ಮಾಡಲು ನಿರಾಕರಿಸಿದರು ಎಂಬ ಕಾರಣಕ್ಕೆ ಇಬ್ಬರು ಯುವತಿಯರನ್ನು ಕಿಡ್ನ್ಯಾಪ್​ ಮಾಡಿ ಅವರ್ ಮೇಲೆ 08 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರಪ್ರದೇಶದ ಖುಷಿನಗರದಲ್ಲಿ ನಡೆದಿದೆ. ಘಟನೆ ಸಂಬಂಧ ಪೊಲೀಸರು ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಬಂಧಿತರನ್ನು ನಾಗೇಂದ್ರ ಯಾದವ್, ಅಸನ್ ಸಿಂಗ್, ಕ್ರಿಶ್ ತಿವಾರಿ, ಅರ್ಥಕ್ ಸಿಂಗ್, ಅಜಿತ್ ಸಿಂಗ್, ವಿವೇಕ್ ಸೇಠ್, ನಿಸಾರ್ ಅನ್ಸಾರಿ ಮತ್ತು ಆದಿತ್ಯ ಸಾಹ್ನಿ ಎಂದು ಗುರುತಿಸಲಾಗಿದ್ದು, ಪೊಲೀಸರು ಇಬ್ಬರ ಮೇಲೆ ಫೈರಿಂಗ್​ ಮಾಡಿ ಬಂಧಿಸಿದ್ದಾರೆ.

ಈ ಕುರಿತು ಮಾತನಾಡಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಂತೋಷ್​ ಮಿಶ್ರಾ, ಸೆಪ್ಟೆಂಬರ್​ 08ರ ರಾತ್ರಿ ಆರೋಪಿಗಳು ಆರ್ಕೆಸ್ಟ್ರಾ ನಡೆಯುತ್ತಿದ್ದ ಸಂದರ್ಭದಲ್ಲಿ ಇಬ್ಬರು ಡ್ಯಾನ್ಸರ್​ಗಳನ್ನು ಗನ್​ ತೋರಿಸಿ ಅಪಹರಿಸಿದ್ದಾರೆ. ಬಳಿಕ ಸ್ನೇಹಿತನ ಬರ್ತ್​ಡೇ ಪಾರ್ಟಿ ಇದ್ದು, ಡ್ಯಾನ್ಸ್​ ಮಾಡುವಂತೆ ಹೇಳಿದ್ದಾರೆ. ಇದಕ್ಕೆ ಇಬ್ಬರು ಯುವತಿಯರು ಒಪ್ಪದಿದ್ದಾಗ ಕುಡಿದ ನಶೆಯಲ್ಲಿದ್ದ ಆರೋಪಿಗಳು ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಪರಾರಿಯಾಗಿದ್ದರು.

ಈ ಕುರಿತು ದೂರು ದಾಖಲಾದ ಕೂಡಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಆರು ಮಂದಿ ಆರೋಪಿಗಳನ್ನು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಕಾರಣ ಅವರ ಕಾಲಿಗೆ ಫೈರಿಂಗ್​ ಮಾಡಿ ಅರೆಸ್ಟ್​ ಮಾಡಲಾಗಿದೆ.  ವಿಚಾರಣೆ ವೇಳೆ ಆರೋಪಿಗಳು ತಮ್ಮ ಎಲ್ಲಾ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ತಡರಾತ್ರಿಯಾಗಿದ್ದರಿಂದ ಯುವತಿಯರು ನೃತ್ಯ ಮಾಡಲು ನಿರಾಕರಿಸಿದ್ದರು. ಬಂದೂಕು ತೋರಿಸಿ ಅಪಹರಿಸಿ ಅತ್ಯಾಚಾರ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಖುಷಿನಗರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಯುವತಿಯರ ವೈದ್ಯಕೀಯ ಪರೀಕ್ಷೆ ಮುಗಿದಿದ್ದು ವರದಿಗಾಗಿ ಕಾಯಲಾಗುತ್ತಿದೆ. ಘಟನೆ ಸಂಬಂಧ ಕೃತ್ಯಕ್ಕೆ ಬಳಸಿದ್ದ ಎರಡು ಫಾರ್ಚುನರ್​ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಂತೋಷ್​ ಮಿಶ್ರಾ ತಿಳಿಸಿದ್ದಾರೆ.