ನ್ಯೂಸ್

ರೆಮಲ್​ ಚೆಂಡಮಾರುತದ ಎಫೆಕ್ಟ್​; ಕಲ್ಲು ಕ್ವಾರಿ ಕುಸಿದು 12 ಮಂದಿ ಸಾವು

ನವದೆಹಲಿ: ರೆಮಲ್​ ಚಂಡಮಾರುತದ ಎಫೆಕ್ಟ್​ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದರ ಪರಿಣಮವಾಗಿ ಸುರಿದ ಭಾರೀ ಮಳೆಗೆ ಕಲ್ಲು ಕ್ವಾರಿಯೊಂದು ಕುಸಿದು 12 ಮಂದಿ ಮೃತಪಟ್ಟಿರುವ ಘಟನೆ ಮಿಜೋರಾಂನ ರಾಜಧಾನಿ ಐಜ್ವಾಲ್​ನಲ್ಲಿ ನಡೆದಿದೆ.

ನಿರಂತರವಾಗಿ ಮಳೆ ಸುರಿದ ಪರಿಣಾಮ ದುರ್ಘಟನೆ ಸಂಭವಿಸಿದ್ದು, 12 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಅವಶೇಷಗಳಡಿ ಇನ್ನಷ್ಟು ಮಂದಿ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಎಸ್​ಡಿಆರ್​ಎಫ್​​ ಅಧಿಕಾರಿಯೊಬ್ಬರು, ಐಜ್ವಾಲ್ ಪಟ್ಟಣದ ದಕ್ಷಿಣ ಹೊರವಲಯದಲ್ಲಿರುವ ಮೆಲ್ತಮ್ ಮತ್ತು ಹ್ಲಿಮೆನ್ ನಡುವಿನ ಪ್ರದೇಶದಲ್ಲಿ ಬೆಳಗ್ಗೆ 6 ಗಂಟೆಗೆ ಈ ಘಟನೆ ನಡೆದಿದೆ. ಮೃತರ ಶವಗಳನ್ನು ಹೊರತೆಗೆಯಲಾಗಿದೆ. ಆದಾಗ್ಯೂ, ಇನ್ನೂ ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ.

ನಿರಂತರ ಮಳೆಯ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ತೊಂದರೆಯಾಗುತ್ತಿದೆ. ಹುಂತಾರ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 6 ರಲ್ಲಿ ಭೂಕುಸಿತದಿಂದಾಗಿ ಐಜ್ವಾಲ್ ದೇಶದ ಇತರ ಭಾಗಗಳಿಂದ ಸಂಪರ್ಕ ಕಡಿತಗೊಂಡಿದೆ. ಭೂಕುಸಿತದಿಂದಾಗಿ ವಿವಿಧ ಅಂತರ್-ರಾಜ್ಯ ಹೆದ್ದಾರಿಗಳು ಸಹ ಅಸ್ತವ್ಯಸ್ತಗೊಂಡಿವೆ ಎಂದು ಎಸ್​ಡಿಆರ್​ಎಫ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.