Ambani Hospital : ಬಹುತೇಕರು ರಾತ್ರಿ ಬೇಗನೆ ಮಲಗಲು ಮತ್ತು ಬೇಗನೆ ಏಳಲು ಬಯಸುತ್ತಾರೆ. ಆದರೆ, ಬಿಡುವಿಲ್ಲದ ಕೆಲಸ ಮತ್ತು ಅತಿಯಾದ ಫೋನ್ ಬಳಕೆಯಿಂದಾಗಿ ಇದು ಸಾಧ್ಯವಾಗುವುದಿಲ್ಲ. ಹೀಗಾಗಿ ತಡವಾಗಿ ಮಲಗಿ, ತಡವಾಗಿ ಏಳುತ್ತೇವೆ. ಇನ್ನೊಂದು ಸತ್ಯ ಏನೆಂದರೆ, ಬಹುತೇಕ ಮಂದಿಗೆ ಮಲಗಲು ಸರಿಯಾದ ಸಮಯ ಯಾವುದು ಎಂಬುದು ತಿಳಿದಿಲ್ಲ.
ತಜ್ಞರ ಪ್ರಕಾರ ರಾತ್ರಿ 8 ಗಂಟೆಗೆ ಮಲಗಿ ಬೆಳಗ್ಗೆ 4 ಗಂಟೆಗೆ ಏಳುವುದು ಒಳ್ಳೆಯ ಅಭ್ಯಾಸ. ಇದು ದೇಹ ಮತ್ತು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುತ್ತಾರೆ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯ ಡಾ. ದತ್ತಾತ್ರೇ ಸೋಲಂಕೆ. ಇದಕ್ಕೆ ಕೆಲವು ಕಾರಣಗಳನ್ನೂ ನೀಡಿದ್ದಾರೆ.
ರಾತ್ರಿ 8 ಗಂಟೆಯಿಂದ ಬೆಳಗಿನ ಜಾವ 4 ಗಂಟೆಯವರೆಗೆ ಮಲಗುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ಡಾ. ಸೋಲಂಕೆ. ಈ ಅಭ್ಯಾಸವನ್ನು ಅನುಸರಿಸಿದವರು ಬೆಳಗ್ಗೆ ಹೆಚ್ಚು ಉಲ್ಲಾಸವನ್ನು ಅನುಭವಿಸುತ್ತಾರಂತೆ.
ಬೇಗ ಮಲಗಿ ಬೇಗ ಏಳುವುದರಿಂದ ದೇಹಕ್ಕೆ ಹೆಚ್ಚಿನ ಶಕ್ತಿ ಸಿಗುತ್ತದೆ. ಆಯಾಸವಿಲ್ಲದೆ ದಿನವಿಡೀ ಕೆಲಸ ಮಾಡಬಹುದು. ನೀವು ಏನು ಮಾಡುತ್ತಿದ್ದೀರಿ ಎಂಬುದರ ಮೇಲೆ ಹೆಚ್ಚು ಗಮನಹರಿಸಲು ಇದು ನಿಮಗೆ ಸಹಾಯ ಮಾಡುತ್ತದೆ ಎಂದು ಡಾ. ಸೋಲಂಕೆ ಹೇಳಿದ್ದಾರೆ.
ರಾತ್ರಿ ಬೇಗ ಮಲಗುವುದರಿಂದ ಆಹಾರವನ್ನು ತ್ವರಿತವಾಗಿ ಜೀರ್ಣಿಸಿಕೊಳ್ಳಲು ಮತ್ತು ದೇಹಕ್ಕೆ ಶಕ್ತಿಯನ್ನು ಒದಗಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ಇದು ನಿದ್ರೆಯನ್ನು ಸಹ ಸುಧಾರಿಸುತ್ತದೆ.
ಅಂದಹಾಗೆ ಆರೋಗ್ಯಕರ ಜೀವನಕ್ಕೆ ಆಹಾರ ಸೇವನೆಯಷ್ಟೇ ನಿದ್ದೆಯೂ ಬಹಳ ಮುಖ್ಯ. ಹೊಟ್ಟೆ ತುಂಬ ತಿಂದು ಗಡತ್ತಾಗಿ ನಿದ್ದೆ ಹೊಡೆಯಿರಿ ಎಂದು ಹಿರಿಯರು ಹೇಳುವುದನ್ನು ಕೇಳಿರುತ್ತೀರಿ. ನಿದ್ದೆ ಮತ್ತು ಆಹಾರದಲ್ಲಿ ಸಮತೋಲನ ಕಾಪಾಡಿಕೊಂಡರೆ ನಿಮ್ಮ ಬಳಿ ಯಾವ ಆರೋಗ್ಯ ಸಮಸ್ಯೆಯು ಸುಳಿಯುವುದಿಲ್ಲ. ಇಲ್ಲವಾದಲ್ಲಿ ಸಾಕಷ್ಟು ಸಮಸ್ಯೆಗಳು ಬಾದಿಸುತ್ತವೆ.
ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಕ್ತಿಗೆ ಸಾಕಷ್ಟು ನಿದ್ರೆ ಬೇಕೇ ಬೇಕು. ಉತ್ತಮ ನಿದ್ರೆಯು ದಿನವಿಡೀ ನಿಮ್ಮನ್ನು ಚೈತನ್ಯದಿಂದ ಇರುವಂತೆ ಮಾಡುತ್ತದೆ. ಅಲ್ಲದೆ, ನಿಮ್ಮ ಮನಸ್ಥಿತಿಯನ್ನು ಸಹ ಸುಧಾರಿಸುತ್ತದೆ. ಇದರಿಂದ ನೀವು ಉತ್ತಮ ಭಾವನೆಯವನ್ನು ಹೊಂದುವಿರಿ. ಒಂದು ವೇಳೆ ಸಮರ್ಪಕ ನಿದ್ರೆಯಾಗದಿದ್ದಲ್ಲಿ ಅದರ ಪರಿಣಾಮ ದಿನವಿಡೀ ಇರುತ್ತದೆ. ಯಾವ ಕೆಲಸಕ್ಕೂ ಉತ್ಸಾಹ ಇರುವುದಿಲ್ಲ ಮತ್ತು ದೇಹ ದಣಿದಿರುವಂತೆ ಭಾಸವಾಗುತ್ತದೆ. ಹೀಗಾಗಿ ದಿನಕ್ಕೆ 7 ರಿಂದ 8 ಗಂಟೆ ನಿದ್ರೆ ಮಾಡಲೇಬೇಕು.