ದಾವಣಗೆರೆ: ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ ಮೂರೇ ದಿನಕ್ಕೆ ತಾಯಿ ಮೃತಪಟ್ಟಿದ್ದು, ಸಿಜೇರಿಯನ್ ಮಾಡಿರುವ ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಸಾವಿಗೀಡಾದ ಮಹಿಳೆಯ ಪಾಲಕರು ಆರೋಪ ಮಾಡಿದ್ದಾರೆ.
ದಾವಣಗೆರೆ ಜಿಲ್ಲಾಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಈ ದುರಂತ ಸಂಭವಿಸಿದ್ದು, ಅನುಷಾ ಸಂಜೀವ್ (23) ಎಂಬ ಬಾಣಂತಿ ಮೃತಪಟ್ಟಿದ್ದಾರೆ. ಇವರು ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಕಮದೋಡು ಗ್ರಾಮದ ನಿವಾಸಿಯಾಗಿದ್ದು, ಚೊಚ್ಚಲ ಹೆರಿಗೆಗಾಗಿ ಶನಿವಾರ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ಇದನ್ನೂ ಓದಿ: ಶಿಕ್ಷಕರ ವರ್ಗಾವಣೆಗೆ ಸಿಕ್ತು ಗ್ರೀನ್ ಸಿಗ್ನಲ್: ಮಂಜೂರು ಹುದ್ದೆಗಳ ಸಂಖ್ಯೆ ಆಧಾರದ ಮೇಲೆ ಟ್ರಾನ್ಸ್ಫರ್
ಇವರಿಗೆ ಸಂಜೀವ ಎಂಬವರ ಜತೆ ಒಂದೂವರೆ ವರ್ಷದ ಹಿಂದೆ ಮದುವೆಯಾಗಿತ್ತು. ಶನಿವಾರ ಸಿಜೇರಿಯನ್ ಮೂಲಕ ಗಂಡು ಮಗುವಿನ ಜನನವಾಗಿತ್ತು. ಆದರೆ ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಅನುಷಾ ಸುಸ್ತಾಗುತ್ತಿದೆ ಎಂದಿದ್ದು, ತಕ್ಷಣಕ್ಕೆ ಸಹಾಯ ಕೋರಿದ್ದರೂ ವೈದ್ಯರು ಸ್ಪಂದಿಸಲಿಲ್ಲ ಎಂದು ಅನುಷಾ ಸಂಬಂಧಿಕರು ಆರೋಪಿಸಿದ್ದಾರೆ. ದಾವಣಗೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.