ಬೆಂಗಳೂರು: ಇಂದು ರಾಜ್ಯಾದ್ಯಂತ ನಡೆದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯ ಮತದಾನ ಪ್ರಮಾಣ ನಿಜಕ್ಕೂ ಚಿಂತೆ ಹಾಗೂ ಚಿಂತನೆಗೆ ಹಚ್ಚುವಂತೆ ಮಾಡಿದೆ. ಮಾತ್ರವಲ್ಲ ರಾಜಧಾನಿ ಬೆಂಗಳೂರಿನಲ್ಲೇ ಯಾಕೆ ಹೀಗಾಯಿತು ಎಂಬ ಪ್ರಶ್ನೆಯನ್ನೂ ಮೂಡಿಸಿದೆ.
ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಈ ಸಲ ಸುಮಾರು ಅರ್ಧಕ್ಕರ್ಧ ಅಂದರೆ ಒಟ್ಟು ಶೇ.52.09 ಮತದಾನವಾಗಿದೆ. 2012ರಲ್ಲಿ ಶೇ.59 ಮತದಾನವಾಗಿತ್ತು. ಈ ಪ್ರಮಾಣ 2016ರಲ್ಲಿ ಶೇ.57ಕ್ಕೆ ಕುಸಿದು ಇದೀಗ ಶೇ.52ಕ್ಕಿಳಿದಿದೆ. 2016ರಲ್ಲಿ ಒಟ್ಟು 1.89 ಲಕ್ಷ ಮತದಾರರಲ್ಲಿ 1.08 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಈ ಬಾರಿ 3.10 ಲಕ್ಷ ಮತದಾರರಲ್ಲಿ 1.59 ಲಕ್ಷ ಮತದಾರರು ಮತ ಚಲಾಯಿಸಿದ್ದಾರೆ. ಅಂದರೆ ಸತತ ಎರಡು ಅವಧಿಗೂ ಮತದಾನ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಇನ್ನೂ ಬೇಸರದ ಸಂಗತಿ ಎಂದರೆ ಕನ್ನಡ ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾಗಿದೆ ಎಂದು ಹೇಳಲಾಗುವ ರಾಜಧಾನಿ ಬೆಂಗಳೂರಿನಲ್ಲಿ ಅತಿಕಡಿಮೆ ಮತದಾನವಾಗಿದ್ದು, ಮತಗಳ ಲೆಕ್ಕಾಚಾರದಲ್ಲಿ ಬೆಂಗಳೂರು ಕಡೆಯ ಸ್ಥಾನದಲ್ಲಿದೆ.
ಇದನ್ನೂ ಓದಿ: ನವೆಂಬರ್ನಲ್ಲೂ ಇಲ್ಲವೇ ಕನ್ನಡಾಭಿಮಾನ!?; ಕಸಾಪ ಚುನಾವಣೆ, ಮತದಾನ ಪ್ರಮಾಣ ಅರ್ಧಕ್ಕಿಂತ ಚೂರೇಚೂರು ಹೆಚ್ಚು…
ಬೆಂಗಳೂರಿನಲ್ಲಿ ಕಳೆದ ವರ್ಷ ಶೇ.35ರಷ್ಟಿದ್ದ ಮತದಾನದ ಪ್ರಮಾಣ ಈ ಬಾರಿ ಶೇ.28.88ಕ್ಕೆ ಕುಸಿದಿದೆ. ಅದರಲ್ಲೂ ವಿಧಾನಸಭಾ ಕ್ಷೇತ್ರವಾರು ಮತಗಟ್ಟೆಗಳನ್ನು ವಿಕೇಂದ್ರೀಕರಣ ಮಾಡಿದ್ದರೂ ಕನ್ನಡ ಸಾಹಿತ್ಯ ಪರಿಷತ್ತಿನ ಕುರಿತು ಮತದಾರರಲ್ಲಿ ನಿರಾಸಕ್ತಿ ಮೂಡಿರುವುದು ಆತಂಕ ಮೂಡಿಸಿದೆ. ಬೆಂಗಳೂರಿನಲ್ಲಿ ಕಳೆದ ವರ್ಷ ಒಟ್ಟು 26,714 ಮತದಾರರಲ್ಲಿ 9,478 ಮತಗಳು ಚಲಾವಣೆಯಾಗಿದ್ದವು. ಆದರೆ ಈ ಬಾರಿ 36,491 ಮತಗಳಲ್ಲಿ ಕೇವಲ 10,538 ಮತಗಳು ಚಲಾವಣೆಯಾಗಿವೆ. ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು (ಶೇ.71.18) ಮತದಾನವಾಗಿದ್ದರೆ ಬೆಂಗಳೂರು ಕಡೆಯ ಸ್ಥಾನದಲ್ಲಿದೆ.