ಜಿಲ್ಲೆ

ಕಾಪು: ವಾಲಿಬಾಲ್ ಆಡುತ್ತಿದ್ದಾಗಲೇ ಕುಸಿದುಬಿದ್ದು ಯುವಕ ಸಾವು

ಉಡುಪಿ: ಕಾಪು ಸಮೀಪದ ಇನ್ನಂಜೆ ಮೈದಾನದಲ್ಲಿ ಆಟವಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು ರಾಜ್ಯಮಟ್ಟದ ವಾಲಿಬಾಲ್ ಆಟಗಾರ ಮೃತಪಟ್ಟ ಘಟನೆ ಶನಿವಾರ ತಡರಾತ್ರಿ ನಡೆದಿದೆ.

ಕುರ್ಕಾಲು, ಸುಭಾಸ್ ನಗರ ನಿವಾಸಿ ದೇವರಾಜ್ ಅಂಚನ್(33) ಮೃತಪಟ್ಟವರು. ರಾಜ್ಯ ಮಟ್ಟದ ಹಲವಾರು ತಂಡಗಳಲ್ಲಿ ಆಟಗಾರನಾಗಿರುವ ಇವರು ಶನಿವಾರ ರಾತ್ರಿ ಇನ್ನಂಜೆ ಮೈದಾನದಲ್ಲಿ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ‌ ಭಾಗವಹಿಸಿದ್ದರು.

ರಾತ್ರಿ ಒಂದು ಗಂಟೆಗೆ ಆಟವಾಡುತ್ತಿದ್ದ ವೇಳೆ ಹೃದಯಾಘಾತಕ್ಕೀಡಾಗಿ ದಿಢೀರ್ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಉಡುಪಿ ಆಸ್ಪತ್ರೆಗೆ ಕರೆದೊಯ್ದರು ಅಷ್ಟರೊಳಗೆ ಕೊನೆಯುಸಿರೆಳೆದರು.

ಅವಿವಾಹಿತರಾಗಿದ್ದ ದೇವರಾಜ್ ನಾಲ್ಕು ತಿಂಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದು, ತಾಯಿ ಮತ್ತು ಐವರು ಸಹೋದರಿಯರನ್ನು ಅಗಲಿದ್ದಾರೆ.