ಬಿಜೆಪಿ ಗೆದ್ದರೆ ಪ್ರತಿ ಹೆಣ್ಣು ಮಗುವಿನ ಖಾತೆಗೆ 1 ಲಕ್ಷ ರೂಪಾಯಿ: ಖುಷ್ಬೂ ಸುಂದರ್​ ಭರವಸೆ

Khushbu
Published on

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆ ಪ್ರಚಾರ ಜೋರಾಗಿದ್ದು, ರಾಜ್ಯದ ಪ್ರತಿ ಮೂಲೆ ಮೂಲೆಯನ್ನು ಪಕ್ಷಗಳ ನಾಯಕರು ಸುತ್ತಾಡುತ್ತಿದ್ದಾರೆ. ಪ್ರಚಾರದ ನಡುವೆ ಶನಿವಾರ ಮಾತನಾಡಿದ ಬಿಜೆಪಿ ನಾಯಕಿ ಖುಷ್ಬೂ ಸುಂದರ್, ಬಿಜೆಪಿ ಗೆದ್ದರೆ ಪ್ರತಿಯೊಬ್ಬ ಹೆಣ್ಣು ಮಗುವಿನ ಖಾತೆಗೆ ಒಂದೊಂದು ಲಕ್ಷ ರೂ. ಜಮಾ ಮಾಡುವುದಾಗಿ ಭರವಸೆ ನೀಡಿದರು.

ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಿರುವುದು ಬಹಳ ಮುಖ್ಯ. ಹುಟ್ಟಿದಾಗ ಆ ಹೆಣ್ಣು ಮಗುವಿನ ಖಾತೆಗೆ ನಾನು ಒಂದು ಲಕ್ಷ ರೂ. ಜಮಾ ಮಾಡುತ್ತೇನೆ. ಇದರಿಂದ ಅವರು ಸುಲಭವಾಗಿ ಬೆಳೆಯಬಹುದು. ಕನಿಷ್ಠ ಪಕ್ಷ ಹೆಣ್ಣು ಮಕ್ಕಳಿಗೆ ಸಹಾಯ ಮಾಡುವ ಸಾಮರ್ಥ್ಯವಿರಬೇಕು ಮತ್ತು ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯಬೇಕೆಂದರು.

ಖುಷ್ಬೂ ಅವರು ನುಂಗಂಬಕ್ಕಂನ ಪಶ್ಚಿಮ ಮಾದಾ ರಸ್ತೆಯ ಥೌಸಂಡ್​ ಲೈಟ್ಸ್​ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದು, ಭರ್ಜರಿಯಾಗಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಇಂದು ಬೆಳಗ್ಗೆಯಷ್ಟೇ ಖುಷ್ಬೂ ಅವರು ಚುನಾವಣಾ ಪ್ರಚಾರದ ಭಾಗವಾಗಿ ದೋಸೆ ಮಾಡಿ ಸುದ್ದಿಯಾದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಅಂದಹಾಗೆ ತಮಿಳುನಾಡು ಚುನಾವಣೆ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಮೇ 2ಕ್ಕೆ ಫಲಿತಾಂಶ ಹೊರಬೀಳಲಿದೆ. (ಏಜೆನ್ಸೀಸ್​)​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net