Vodafone Idea : ದೇಶದ ಪ್ರಮುಖ ದೂರಸಂಪರ್ಕ ಸೇವಾ ಸಂಸ್ಥೆಗಳಲ್ಲಿ ಒಂದಾಗಿರುವ ವಿ (ವೊಡಾಫೋನ್ ಐಡಿಯಾ - Vi) ಬೆಂಗಳೂರಿನಲ್ಲಿ ತನ್ನ 5ಜಿ ಸೇವೆ ಆರಂಭಿಸುತ್ತಿರುವುದಾಗಿ ಪ್ರಕಟಿಸಿದೆ. ದೇಶದ ತಂತ್ರಜ್ಞಾನ ಕೇಂದ್ರ ಖ್ಯಾತಿಯ ಬೆಂಗಳೂರು ಮಹಾನಗರದ ನಿವಾಸಿಗಳು ಮತ್ತು ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ದಿಮೆ - ವಹಿವಾಟುಗಳು ಈಗ "ವಿ"ದ 5ಜಿ ದೂರಸಂಪರ್ಕ ಜಾಲದಲ್ಲಿ ಕ್ಷಿಪ್ರಗತಿಯ ಡೇಟಾ , ದತ್ತಾಂಶ ಸಂಸ್ಕರಿಸಿ ಅತ್ಯಲ್ಪ ವಿಳಂಬದಲ್ಲಿ ಪ್ರತಿಕ್ರಿಯಿಸುವ ಸೌಲಭ್ಯ ಮತ್ತು ವರ್ಧಿತ ಸಂಪರ್ಕ ಸೌಲಭ್ಯಗಳ ಪ್ರಯೋಜನ ಪಡೆದುಕೊಳ್ಳಬಹುದು.
ಮುಂಬೈ, ದೆಹಲಿ-ಎನ್‌ಸಿಆರ್, ಪಟನಾ ಮತ್ತು ಚಂಡಿಗಢದಲ್ಲಿ ವಿ - ಇತ್ತೀಚಿಗೆ ಜಾರಿಗೆ ತಂದಿರುವ 5ಜಿ ಸೌಲಭ್ಯದ ಮುಂದುವರಿದ ಭಾಗವಾಗಿ ಬೆಂಗಳೂರಿನಲ್ಲಿ ಈ ಸೇವೆ ಪರಿಚಯಿಸಲಾಗಿದೆ. 5ಜಿ ತರಂಗಾಂತರ ಖರೀದಿಸಿರುವ ತನ್ನ ಎಲ್ಲಾ 17 ದೂರಸಂಪರ್ಕ ಆದ್ಯತಾ ವಲಯಗಳಲ್ಲಿ ಈ ಸೌಲಭ್ಯವನ್ನು ಕಂಪನಿಯು ಹಂತ ಹಂತವಾಗಿ ಜಾರಿಗೆ ತರುತ್ತಿದೆ.
ಈ ವರ್ಷದ ಆಗಸ್ಟ್ ವೇಳೆಗೆ 5ಜಿ- ಸೌಲಭ್ಯದ ಮೊಬೈಲ್‌ಗಳನ್ನು ಹೊಂದಿರುವ ಬೆಂಗಳೂರಿನಲ್ಲಿ ಇರುವ ವಿ ಬಳಕೆದಾರರು ಈಗ “ವಿ”ನ 5ಜಿ ಸೇವೆಗಳನ್ನು ಬಳಸಬಹುದಾಗಿದೆ. ನಗರದ ಡಿಜಿಟಲ್ ಪ್ರೇಮಿ ಗ್ರಾಹಕರಿಗೆ ಅತ್ಯುತ್ತಮ ಬಗೆಯ ಆನ್‌ಲೈನ್ ಅನುಭವಗಳನ್ನು ಒದಗಿಸುವ ರೀತಿಯಲ್ಲಿ ಈ ಸೇವೆಗಳನ್ನು ವಿನ್ಯಾಸಗೊಳಿಸಲಾಗಿದೆ.
ಆರಂಭಿಕ ಕೊಡುಗೆಯಾಗಿ, 299 ರೂಪಾಯಿಯಿಂದ ಪ್ರಾರಂಭವಾಗುವ ಯೋಜನೆಗಳಲ್ಲಿ ಬಳಕೆದಾರರಿಗೆ ವಿ -ಅನಿಯಮಿತ 5ಜಿ ಡೇಟಾ ಸೌಲಭ್ಯ ಒದಗಿಸುತ್ತಿದೆ. ಗ್ರಾಹಕರು ಅನಿಯಮಿತ ಇಂಟರ್‌ನೆಟ್‌ನಿಂದ ಚಲನಚಿತ್ರ ಮತ್ತಿತರ ಕಾರ್ಯಕ್ರಮಗಳನ್ನು ವೀಕ್ಷಿಸುವ (ಸ್ಟ್ರೀಮಿಂಗ್) ಸೇವೆಗಳು, ಗೇಮಿಂಗ್, ವಿಡಿಯೋ ಕಾನ್ಫರೆನ್ಸ್, ವೇಗದ ಡೌನ್‌ಲೋಡ್ ಮತ್ತು ನೈಜ-ಸಮಯದ ಕ್ಲೌಡ್ ಸೌಲಭ್ಯದ ಪ್ರಯೋಜನಗಳನ್ನೂ ಆನಂದಿಸಬಹುದು.
ಬೆಂಗಳೂರಿನಲ್ಲಿ ಈ ಸೇವೆ ಆರಂಭಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ವೊಡಾಫೋನ್ ಐಡಿಯಾದ ಕರ್ನಾಟಕ ವಹಿವಾಟು ಮುಖ್ಯಸ್ಥ ಆನಂದ ದಾನಿ ಅವರು, "ತಂತ್ರಜ್ಞಾನ ಮತ್ತು ಡಿಜಿಟಲ್ ನಾವೀನ್ಯತೆಯಲ್ಲಿ ಮುಂಚೂಣಿಯಲ್ಲಿರುವ ನಗರವಾದ ಬೆಂಗಳೂರಿನಲ್ಲಿ “ವಿ” ನ 5ಜಿ ಸೇವೆ ಆರಂಭಿಸಲು ನಾವು ಉತ್ಸುಕರಾಗಿದ್ದೇವೆ. ನಮ್ಮ ಮುಂದಿನ ಪೀಳಿಗೆಯ 5ಜಿ ಮತ್ತು ವರ್ಧಿತ 4ಜಿ ಸಂಪರ್ಕ ಜಾಲದ ನೆರವಿನಿಂದ ನಮ್ಮ ಬಳಕೆದಾರರಿಗೆ ಹೆಚ್ಚುವರಿ ಅನುಭವ ನೀಡುವ ಗುರಿಯನ್ನು ನಾವು ಹೊಂದಿದ್ದೇವೆ. ಈ ಸೇವೆ ಆರಂಭಿಸಿದ ಮಾರುಕಟ್ಟೆಗಳಲ್ಲಿ ನಮಗೆ ದೊರೆತಿರುವ ಉತ್ತೇಜಕರ ಪ್ರತಿಕ್ರಿಯೆ ಮತ್ತು ಸದೃಢ ಕಾರ್ಯಕ್ಷಮತೆಯಿಂದ ಪ್ರೇರಿತರಾಗಿರುವ ನಾವು, ಹೆಚ್ಚುತ್ತಿರುವ ಬೇಡಿಕೆ ಮತ್ತು 5ಜಿ ಮೊಬೈಲ್‌ಗಳ ಬಳಕೆ ಹೆಚ್ಚಳಕ್ಕೆ ಅನುಗುಣವಾಗಿ ನಮ್ಮ 5ಜಿ ಹೆಜ್ಜೆ ಗುರುತುಗಳನ್ನು ವಿಸ್ತರಿಸಲು ಬದ್ಧರಾಗಿದ್ದೇವೆ" ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶ್ರೇಷ್ಠ ಗುಣಮಟ್ಟದ 5ಜಿ ಅನುಭವ ಖಚಿತಪಡಿಸಿಕೊಳ್ಳಲು, ಸ್ಯಾಮ್‌ಸಂಗ್ ಜೊತೆಗಿನ ಪಾಲುದಾರಿಕೆ ನೆರವಿನಿಂದ ವಿ - ಸುಧಾರಿತ, ದಕ್ಷ ಇಂಧನದ ಮೂಲಸೌಲಭ್ಯಗಳನ್ನು ಅಳವಡಿಸಿದೆ. ಸಂಪರ್ಕ ಜಾಲದ ಕಾರ್ಯಕ್ಷಮತೆಯನ್ನು ಸ್ವಯಂಚಾಲಿತವಾಗಿ ಅತ್ಯುತ್ತಮವಾಗಿಸಲು ಕೃತಕ ಬುದ್ಧಿಮತ್ತೆ (ಎಐ) ಚಾಲಿತ ಸ್ವಯಂ-ಸಂಘಟಿತ ಸಂಪರ್ಕ ಜಾಲಗಳನ್ನು (ಎಸ್‌ಒಎನ್) ಜಾರಿಗೆ ತಂದಿದೆ. ಹೆಚ್ಚಿನ ಪ್ರಸರಣ ಶಕ್ತಿ, ಬಹು-ತಂತ್ರಜ್ಞಾನ ಬೆಂಬಲಿತ, ದಕ್ಷ ಇಂಧನ, ಸ್ಮಾಲ್ ಫಾರ್ಮ್ ಫ್ಯಾಕ್ಟರ್ ರೇಡಿಯೊಗಳ ಯಶಸ್ವಿ ಸಮನ್ವಯಗೊಳಿಸುವುದರ ನೆರವಿನಿಂದ ಬೆಂಗಳೂರಿನ ಚಂದಾದಾರರಿಗೆ ಅಡೆತಡೆರಹಿತ 5ಜಿ ಅನುಭವಕ್ಕಾಗಿ ವಿ - ಪರಿಸರ ಸ್ನೇಹಿ ಪರಿಹಾರಗಳನ್ನು ಜಾರಿಗೊಳಿಸಿದೆ.
ತನ್ನ 5ಜಿ ಸೇವೆ ವಿಸ್ತರಣೆಯ ಜೊತೆಗೆ, ಹೆಚ್ಚುವರಿ ಸೇವಾ ವ್ಯಾಪ್ತಿ, ತ್ವರಿತ ಡೇಟಾ ಮತ್ತು ಬಳಕೆದಾರರಿಗೆ ಒಟ್ಟಾರೆ ಉತ್ತಮ ಅನುಭವ ನೀಡಲು ಕರ್ನಾಟಕದಲ್ಲಿ ವಿ ತನ್ನ 4ಜಿ ಸಂಪರ್ಕ ಜಾಲವನ್ನು ಗಮನಾರ್ಹವಾಗಿ ಮೇಲ್‌ದರ್ಜೆಗೆ ಏರಿಸಿದೆ.
ಒಳಾಂಗಣದಲ್ಲಿ ಮೊಬೈಲ್ ಸೇವೆ ಬಲಪಡಿಸಲು ಸುಮಾರು 3,000 ಸೈಟ್‌ಗಳಲ್ಲಿ 900 ಮೆಗಾಹರ್ಟ್ಸ್ ತರಂಗಾಂತರ ನಿಯೋಜಿಸಿದೆ. 1,800 ಸೈಟ್‌ಗಳಲ್ಲಿ 2100 ಮೆಗಾಹರ್ಟ್ಸ್ ತರಂಗಾಂತರ ಸಾಮರ್ಥ್ಯವನ್ನು ದ್ವಿಗುಣಗೊಳಿಸಿದೆ. 1,000 ಸ್ಥಳಗಳಿಗೆ 2100 ಮೆಗಾಹರ್ಟ್ಸ್ ತರಂಗಾಂತರವನ್ನು ಸೇರ್ಪಡೆ ಮಾಡಿದೆ. ಇದಕ್ಕೆ ಪೂರಕವಾಗಿ, 4,100ಕ್ಕೂ ಹೆಚ್ಚು ಸೈಟ್‌ಗಳಲ್ಲಿ ತನ್ನ 1800 ಮೆಗಾಹರ್ಟ್ಸ್ ಸಾಮರ್ಥ್ಯವನ್ನು ವಿ ಬಲಪಡಿಸಿದೆ. ಇದು ಗ್ರಾಹಕರನ್ನು ತಲುಪುವ ಮತ್ತು ದತ್ತಾಂಶ ದಟ್ಟಣೆ ನಿರ್ವಹಿಸುವ ವಿ -ದ ಸಾಮರ್ಥ್ಯಗಳನ್ನು ಹೆಚ್ಚಿಸಿದೆ. 10 ತಿಂಗಳುಗಳಲ್ಲಿ ಜಾರಿಗೆ ತರಲಾದ ಈ ಎಲ್ಲ ನವೀಕರಣಗಳು ಮಾರ್ಚ್ 24 ರಿಂದ ಶೇಕಡ 46ರಷ್ಟು ಸಾಮರ್ಥ್ಯ ಹೆಚ್ಚಳಕ್ಕೆ ಕಾರಣವಾಗಿವೆ. ಇವೆಲ್ಲವೂ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸ್ಥಿರ ಮತ್ತು ಉತ್ತಮ-ಗುಣಮಟ್ಟದ ದೂರ ಸಂಪರ್ಕ ಸೇವೆಗಳನ್ನು ತಲುಪಿಸುವ ವಿ -ನ ಬದ್ಧತೆಗೆ ನಿದರ್ಶನಗಳಾಗಿವೆ.
ಗ್ರಾಹಕರು ಮತ್ತು ಉದ್ದಿಮೆ – ವಹಿವಾಟುಗಳ ಬದಲಾಗುತ್ತಿರುವ ಡಿಜಿಟಲ್ ಅಗತ್ಯಗಳನ್ನು ಪೂರೈಸುವ, ಭವಿಷ್ಯಕ್ಕೆ ಸನ್ನದ್ಧ ಸ್ಥಿತಿಯಲ್ಲಿ ಇರುವ ದೂರಸಂಪರ್ಕ ಜಾಲ ನಿರ್ಮಿಸಲು ವಿ ಬದ್ಧವಾಗಿದೆ. 5ಜಿ ಸೇವೆಗಳ ಲಭ್ಯತೆ, ಬೆಲೆ ನಿಗದಿ ಮತ್ತು ಅಗತ್ಯ ಮೊಬೈಲ್‌ಗಳ ಕುರಿತು ಹೆಚ್ಚಿನ ವಿವರಗಳಿಗೆ https://www.myವಿ.in/5g-network - ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ.