ಹೆಬ್ರಿ ಕುಚ್ಚೂರು ಮಡಾಮಕ್ಕಿ ರಸ್ತೆಯ ವಿಸ್ತರಣೆ ಕಾಮಗಾರಿ ನಡೆಸಲು ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ಮಠದಬೆಟ್ಟು ಪರಿಸರದಲ್ಲಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಿದರು. 
ಜಿಲ್ಲೆ

ಕುಚ್ಚೂರು-ಮಡಾಮಕ್ಕಿ ರಸ್ತೆ ವಿಸ್ತರಣೆ ಕಾಮಗಾರಿಗೆ ಅಡ್ಡಿ: ಗ್ರಾಮಸ್ಥರಿಂದ ರಸ್ತೆ ತಡೆ, ಬೃಹತ್ ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಅರಣ್ಯ ಇಲಾಖೆ ಅಧಿಕಾರಿಗಳು ಕಾನೂನಿನ ನೆಪ ಹೇಳಿ ಹೆಬ್ರಿ, ಕುಚ್ಚೂರು, ಮಡಾಮಕ್ಕಿ ರಸ್ತೆ ವಿಸ್ತರಣೆ ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದಾರೆ. ಲೋಕೋಪಯೋಗಿ ಇಲಾಖೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಹೊಂದಾಣಿಕೆ ಇಲ್ಲದೆ ತೊಂದರೆಯಾಗುತ್ತಿದೆ ಎಂದು ಮಂಗಳವಾರ ಮಠದಬೆಟ್ಟಿನಲ್ಲಿ ಬೃಹತ್ ಸಂಖ್ಯೆಯಲ್ಲಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಮನವೊಲಿಕೆಗೆ ಬಗ್ಗದೆ ಗ್ರಾಮಸ್ಥರ ಪಟ್ಟು

ಹೆಬ್ರಿ ತಹಸೀಲ್ದಾರ್ ಎಸ್.ಎ.ಪ್ರಸಾದ್, ಹೆಬ್ರಿ ಎಸ್‌ಐ ಮಹಾಂತೇಶ್ ಜಾಬಗೌಡ, ವನ್ಯಜೀವಿ ವಿಭಾಗದ ಆರ್‌ಎಫ್‌ಒ ಗೌರವ್ ಅವರ ಮನವೊಲಿಕೆಗೆ ಬಗ್ಗದ ಪ್ರತಿಭಟನಾಕಾರರು, ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಡಿಸಿಎಫ್ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬರಲೇಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದರು.

ಪಿಡಬ್ಲುೃಡಿ ವಿರುದ್ಧ ಗ್ರಾಮಸ್ಥರ ಆಕ್ರೋಶ

ಸ್ಥಳಕ್ಕೆ ಆಗಮಿಸಿದ ವನ್ಯಜೀವಿ ವಿಭಾಗದ ಡಿಸಿಎಫ್ ಶಿವಾನಂದ ಬಾಬು, ರಸ್ತೆ ವಿಸ್ತರಣೆಗೆ ಅರಣ್ಯ ಇಲಾಖೆಯಿಂದ ಅಡ್ಡಿಯಿಲ್ಲ. ಫಾರೆಸ್ಟ್ ಕ್ಲಿಯರೆನ್ಸ್ ಪಡೆದು ರಸ್ತೆ ನಿರ್ಮಿಸಿ ಎಂದು ಹೇಳಿದಾಗ, ಕ್ಲಿಯರೆನ್ಸ್ ಪಡೆಯದೆ ರಸ್ತೆ ನಿರ್ಮಿಸಿರುವ ಪಿಡಬ್ಲುೃಡಿ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಫಾರೆಸ್ಟ್ ಕ್ಲಿಯರೆನ್ಸ್‌ಗಾಗಿ ಅರ್ಜಿ

ಲೋಕೋಪಯೋಗಿ ಇಲಾಖೆಯ ಎಇಇ ತ್ರಿನೇಶ್ವರ್ ಬುಧವಾರವೇ ಫಾರೆಸ್ಟ್ ಕ್ಲಿಯರೆನ್ಸ್‌ಗಾಗಿ ಅರ್ಜಿ ಸಲ್ಲಿಸಿ ಕಾನೂನು ಪ್ರಕಾರವೇ ರಸ್ತೆ ನಿರ್ಮಾಣ ಮಾಡುತ್ತೇವೆ. ಜನತೆಗೆ ಸಮಸ್ಯೆಯಾಗಲು ಬಿಡುವುದಿಲ್ಲ ಎಂದರು.

ಹೆಬ್ರಿ ಎಸ್‌ಐ ಮಹಾಂತೇಶ್ ಮತ್ತು ತಂಡ ಬಂದೋಬಸ್ತ್ ಏರ್ಪಡಿಸಿದ್ದರು. ಪ್ರತಿಭಟನಾ ಸ್ಥಳಕ್ಕೆ ಹೆಬ್ರಿ ತಹಸೀಲ್ದಾರ್ ಪ್ರಸಾದ್ ಭೇಟಿ ನೀಡಿ ಸಮಸ್ಯೆ ಆಲಿಸಿದರು. ಪ್ರತಿಭಟನೆಯಲ್ಲಿ ಕಾರ್ಯಕರ್ತ ಕುಚ್ಚೂರು ಶ್ರೀಕಾಂತ್ ಪೂಜಾರಿ ಸೇರಿದಂತೆ ಜನಪ್ರತಿನಿಧಿಗಳು, ಸಾಮಾಜಿಕ ಹೋರಾಟಗಾರರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.

ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ

ನಿಯಮದಂತೆ ರಸ್ತೆ ಮಾಡಲು ಸೂಕ್ತ ಅನುಮತಿ ಪಡೆದಿದ್ದರೆ ಏನೂ ಸಮಸ್ಯೆ ಆಗುತ್ತಿರಲಿಲ್ಲ. ಒಂದು ವೇಳೆ ನೀವು ನಿಯಮ ಮೀರಿ ಹೋದರೆ ನಮ್ಮ ತಲೆದಂಡ ಆಗುತ್ತದೆ. ಅರಣ್ಯ ಇಲಾಖೆ ಅಭಿವೃದ್ಧಿಗೆ ತೊಂದರೆ ಮಾಡುವುದಿಲ್ಲ. ಲೋಕೋಪಯೋಗಿ ಇಲಾಖೆಯವರು ಆನ್‌ಲೈನ್ ಮೂಲಕ ಫಾರೆಸ್ಟ್ ಕ್ಲಿಯರೆನ್ಸ್ ಗೆ ಅರ್ಜಿ ಹಾಕಲಿ. ನಾನು ಇಂದೇ ಬೆಂಗಳೂರಿಗೆ ತೆರಳಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಡಿಸಿಎಫ್ ಶಿವಾನಂದ ಬಾಬು ಹೇಳಿದರು.

ಸ್ಥಳೀಯ ವ್ಯಕ್ತಿಯಿಂದಲೇ ಅರ್ಜಿ

ಸ್ಥಳೀಯ ವ್ಯಕ್ತಿ ಅರಣ್ಯ ಇಲಾಖೆಗೆ ಅರ್ಜಿ ಹಾಕಿದ್ದರಿಂದ ರಸ್ತೆ ನಿರ್ಮಾಣಕ್ಕೆ ತೊಡಕಾಗಿದೆ. ಅರಣ್ಯ ಇಲಾಖೆಯವರು ಅಭಿವೃದ್ಧಿಗೆ ಅಡ್ಡಿ ಮಾಡಿಲ್ಲ. ಸ್ಥಳೀಯರ ದೂರಿನಿಂದಲೇ ಸಮಸ್ಯೆಯಾಗಿದೆ. ಅಧಿಕಾರಿಗಳು ಸಮ್ಮತಿಸಿದರೆ ಹತ್ತು ದಿನದೊಳಗೆ ರಸ್ತೆ ನಿರ್ಮಾಣ ಮಾಡುತ್ತೇನೆ ಎಂದು ಗುತ್ತಿಗೆದಾರ ವಾದಿರಾಜ ಶೆಟ್ಟಿ ಹೇಳಿದರು.