ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ಎಲ್ಲವನ್ನೂ ತನ್ನೊಡಲಲ್ಲಿಟ್ಟುಕೊಂಡು ಜೀರ್ಣಿಸಿಕೊಳ್ಳುವ ಭೂಮಿಯೇ ಪ್ಲಾಸ್ಟಿಕ್ ಜೀರ್ಣಿಸಿಕೊಳ್ಳೋದಿಲ್ಲ ಅಂದ ಮೇಲೆ ಪ್ರಾಣಿಗಳು ತಿಂದು ಜೀರ್ಣಿಸಿಕೊಳ್ಳೋದುಂಟಾ? ಕೊಲ್ಲೂರಿನಂಥ ಪವಿತ್ರ ಕ್ಷೇತ್ರದಲ್ಲೂ ತ್ಯಾಜ್ಯದ ಸಮಸ್ಯೆ ಕಾಡುತ್ತಿದೆ.
ಹಚ್ಚ ಹಸಿರು ವನಸಿರಿ ನಡುವೆ ರಾಶಿಬಿದ್ದ ತ್ಯಾಜ್ಯ ಗುಪ್ಪೆಯಲ್ಲಿ ಜಾನುವಾರು, ಬೆಳ್ಳಕ್ಕಿ, ಮಂಗ, ನಾಯಿಗಳು ಹಗಲುಹೊತ್ತು ಕಾಣಿಸಿಕೊಂಡರೆ ಕತ್ತಲಾದ ನಂತರ ಕಾಡು ಪ್ರಾಣಿಗಳು ತ್ಯಾಜ್ಯ ರಾಶಿಗೆ ಬಂದು ಬಾಯಿಹಾಕೋದಿಲ್ಲ ಎನ್ನಲಾಗದು.
ಕೊಲೂರಿನ ತ್ಯಾಜ್ಯ ನಂಬಿಕೆ, ಗೌರವಗಳನ್ನು ಬೀದಿಗೆ ತಂದು ನಿಲ್ಲಿಸಿದೆ. ಗೋರಕ್ಷಕರು ಬಾಯಿಮುಚ್ಚಿ ಕೂತಿದ್ದಾರೆ. ಕೊಲ್ಲೂರು ತ್ಯಾಜ್ಯ ಸೌಪರ್ಣಿಕಾ, ದೇವಸ್ಥಾನ, ತೀರ್ಥನದಿಗಳನ್ನು ಅಪವಿತ್ರ ಗೊಳಿಸಿಯಾಗಿದೆ.
ಡಂಪಿಂಗ್ ಯಾರ್ಡ್ ಒಳಗಿದ್ದ ಮರಗಳು ಸಾಯುತ್ತಿರುವುದು ತ್ಯಾಜ್ಯ ಅದೆಷ್ಟು ಅಪಾಯಕಾರಿ ಅನ್ನೋದಕ್ಕೆ ಸೂಚಕ. ತ್ಯಾಜ್ಯ ರಾಶಿಯಿಂದ ಹರಿದು ಬರುವ ದ್ರವ ತ್ಯಾಜ್ಯ ಹಸುರಿಗೆ ಕೊಳ್ಳಿಯಿಟ್ಟರೂ ಅಚ್ಚರಿಯಲ್ಲ. ಡಂಪಿಂಗ್ ಯಾರ್ಡ್ ಮಾಡುವುದಕ್ಕಿಂತ ಮುನ್ನ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ, ದೂರಾಲೋಚನೆ ಇಲ್ಲದೆ ಮಾಡಿದ ಕೆಲಸ ಹೇಗೆ ಹಳ್ಳಹತ್ತುತ್ತದೆ ಅನ್ನೋದಕ್ಕೆ ಕೊಲ್ಲೂರು ಡಂಪಿಂಗ್ ಯಾರ್ಡ್ ಸಾಕ್ಷಿ.
ಕೊಲ್ಲೂರು ವ್ಯವಸ್ಥಾಪನಾ ಸಮಿತಿ ಆಯ್ಕೆ ಕಸರತ್ತು, ಲಾಬಿ ನಡೆಯುತ್ತೆ ಹೊರತು ಕೊಲ್ಲೂರು ಕಾಳಜಿ ಬಗ್ಗೆ ತುಟಿ ಬಿಚ್ಚೊಲ್ಲ. ಸಣ್ಣ ಪುಟ್ಟ ವಿಷಯ ನ್ಯಾಯಾಲಯ ಮೆಟ್ಟಿಲೇರುತ್ತೆ. ಆದರೆ ಇಷ್ಟು ದೊಡ್ಡ ಮಟ್ಟದ ಸಮಸ್ಯೆ ಪ್ರಶ್ನೆ ಆಗೋದಿಲ್ಲ? ಅರ್ಧ ಡಂಪಿಂಗ್ ಯಾರ್ಡ್‌ಗೆ ಗ್ರಾಪಂ, ಮತ್ತರ್ಧ ದೇವಸ್ಥಾನ ತ್ಯಾಜ್ಯ ಹಾಕುತ್ತಿರುವುದು ಅಪಸವ್ಯಕ್ಕೆ ನೇರ ಹೊಣೆ. ಉತ್ತರಿಬೇಕಾದ ಅಧಿಕಾರಿಗಳಿಗೆ ಕರೆ ಸ್ವೀಕರಿಸುವ ಅಭ್ಯಾಸವೇ ಇಲ್ಲ. ಜಾನುವಾರುಗಳನ್ನು ದೇವರು ಕಾಪಾಡೋದಕ್ಕೆ ಸಾಧ್ಯವಿಲ್ಲ. ಹನ್ಬೇರಿ, ಅರೆಹೊಳೆ ನಂತರ ಮುಂದಿನ ಸರದಿ ಕೊಲ್ಲೂರಾದರೂ ಅಚ್ಚರಿಯಿಲ್ಲ.
ಸಲಹೆ ಬೇಡ, ಬದ್ಧ್ದತೆ ಬೇಕು
ಪ್ಲಾಸ್ಟಿಕ್ ನಿಷೇಧಿಸಲಾಗಿದೆ. ಆದರೆ ಮತ್ತೆ ಎಲ್ಲಿಂದ ಪ್ಲಾಸ್ಟಿಕ್ ತ್ಯಾಜ್ಯ ಬರುತ್ತೆ ಅಂತ ನಮ್ಮನ್ನ ನಾವೇ ಕೇಳಿಕೊಂಡರೆ ಉತ್ತರ ಸಿಗುತ್ತದೆ. ಪ್ಲಾಸ್ಟಿಕ್ ನಿಷೇಧಿಸುವ ಬದಲು ಪ್ಲಾಸ್ಟಿಕ್ ಉತ್ಪಾದನೆ ನಿಲ್ಲಿಸಲಿ ಎನ್ನುವ ಸಲಹೆ ಎಲ್ಲರಿಂದಲೂ ಬರುತ್ತದೆ. ಸಲಹೆ ನೀಡುವ ಬದಲು ಬದ್ಧತೆ ಪ್ರದರ್ಶಿಸಿದರೆ ಪ್ಲಾಸ್ಟಿಕ್ ತ್ಯಾಜ್ಯಕ್ಕೊಂದು ಕಡಿವಾಣ ಬೀಳುತ್ತಿತ್ತು.
ಪಶುವೈದ್ಯರು ಏನೆನ್ನುತ್ತಾರೆ..?
ಹಸುವಿನಲ್ಲಿ ನಾಲ್ಕು ಹೊಟ್ಟೆ ದ್ರಾಕ್ಷಿ ಗೊಂಚಲಿನ ಹಾಗೆ ಇರುತ್ತದೆ. ತಿಂದ ಹುಲ್ಲು ಮೊದಲ ಹೊಟ್ಟೆಗೆ ಹೋಗಿ, ಅಲ್ಲಿಂದ ಮತ್ತೊಂದು ಹೊಟ್ಟೆಗೆ ಹೋಗುತ್ತದೆ. ಪ್ಲಾಸ್ಟಿಕ್ ನಾಲ್ಕನೇ ಹೊಟ್ಟೆಯಲ್ಲಿ ಸ್ಟಾಕ್ ಆಗುತ್ತೆ. ಹೀಗೆ ನಿಂತ ಆಹಾರದಿಂದ ಹಸುವಿಗೆ ಹೊಟ್ಟೆ ಉಬ್ಬರಿಸಿ, ಹಸು ಅನಾರೋಗ್ಯಕ್ಕೆ ಒಳಗಾಗುತ್ತದೆ. ಆಗ ಶಸ್ತ್ರ ಚಿಕಿತ್ಸೆ ಮಾಡಿ ಪ್ಲಾಸ್ಟಿಕ್ ಹೊರ ತೆಗೆಯುವುದೇ ಪರಿಹಾರ. ಸೂಕ್ತ ಸಮಯದಲ್ಲಿ ಶಸ್ತ್ರ ಚಿಕಿತ್ಸೆ ಮಾಡದಿದ್ದರೆ ಹಸು ಸಾಯುತ್ತದೆ.
ಮರೆಯಾಗದೆ ಕಾಡುವ ಹಸುಗಳ ಸಾವು
ನಾಲ್ಕು ವರ್ಷದ ಹಿಂದೆ ಬೈಂದೂರು ಹೆನ್ಬೇರು, ಅರೆಹೊಳೆಯಲ್ಲಿ ತ್ಯಾಜ್ಯ ತಿಂದು 65ಕ್ಕೂ ಮಿಕ್ಕ ಹಸು, ಮರು ವರ್ಷ ಐದು ಹಸು ಸತ್ತುಹೋಗಿದ್ದು, ಒತ್ತಿನೆಣೆ ಪರಿಸರದ ತ್ಯಾಜ್ಯ ಕಾರಣ ಎಂದು ದೃಢಪಟ್ಟಿತ್ತು. ಅರೆೆಹೊಳೆ ಬಳಿ ಜಾನುವಾರು ಸಾವಿಗೆ ತ್ಯಾಜ್ಯವೇ ಕಾರಣ ಎಂದು ಪಶುಚಿಕಿತ್ಸಕರು ಷರಾ ಬರೆದಿದ್ದಾರೆ. ಇದೂವರೆಗೆ ತ್ಯಾಜ್ಯಕ್ಕೆ ಬಲಿಯಾದ ಹಸುಗಳ ಸಂಖ್ಯೆ 152!
ಕೊಲ್ಲೂರು ಗ್ರಾಪಂ ಡಂಪಿಂಗ್ ಯಾರ್ಡ್ ಬಗ್ಗೆ ಇನ್ನಷ್ಟು ಜವಾಬ್ದಾರಿ ವಹಿಸಬೇಕು. ಗೇಟ್ ದುರಸ್ತಿಮಾಡಬೇಕು. ಕಂಪೌಂಡ್ ಕುಸಿದಿರುವುದರಿಂದ ಪ್ರಾಣಿಗಳು ಒಳನುಗ್ಗುತ್ತಿವೆ. ತಕ್ಷಣ ದುರಸ್ತಿ ಮಾಡಿ ನಿರ್ವಹಣೆ ಮಾಡುವುದಾಗಿ ಹೇಳಿದ್ದಾರೆ. ತ್ಯಾಜ್ಯ ಮರುಸಂಸ್ಕರಣೆಗೆ ಇಂಡಸ್ಟ್ರಿಗಳ ಕೊರತೆಯಿದ್ದು, ಮರುಉತ್ಪಾದನೆ ಬಗ್ಗೆ ಗಮನ ಹರಿಸಲಾಗುತ್ತದೆ. ಸಾರ್ವಜನಿಕರು, ಭಕ್ತರು ಕ್ಷೇತ್ರದ ಸ್ವಚ್ಛತೆ ಬಗ್ಗೆ ಗಮನ ಕೊಡಬೇಕು.
-ಗುರುರಾಜ ಗಂಟಿಹೊಳೆ, ಬೈಂದೂರು ಶಾಸಕ