More

    ಗಡುವು ಕಳೆದು ಬಂದ ಗರ್ಡರ್: ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಕ್ಷಣಗಣನೆ

    ಪ್ರಶಾಂತ ಭಾಗ್ವತ, ಉಡುಪಿ
    ಏಳು ದಶಕಗಳಿಂದ ಒಂದೊಂದೇ ನೆಪಗಳಿಂದ ಮುಂದೂಡಲ್ಪಡುತ್ತಲೇ ಇದ್ದ ಇಂದ್ರಾಳಿಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸುವ ಕಾಲ ಸನ್ನಿಹಿತವಾದಂತಿದೆ. ಕಳೆದ ಡಿಸೆಂಬರ್ ಅಂತ್ಯಕ್ಕೆ ಬರಬೇಕಿದ್ದ 15 ಫೀಟ್ ಉದ್ದದ 6 ಸ್ಟೀಲ್ ಬ್ರಿಡ್ಜ್ ಗರ್ಡರ್‌ಗಳು ಹುಬ್ಬಳ್ಳಿಯಿಂದ ಉಡುಪಿಗೆ ಶನಿವಾರ ಸಂಜೆ ಆಗಮಿಸಿವೆ.
    ಕಾಮಗಾರಿ ಆರಂಭಿಸಲು ಕೊಂಕಣ ರೈಲ್ವೆ ಇಲಾಖೆ ಜಿಲ್ಲಾಡಳಿತಕ್ಕೆ ಎನ್‌ಒಸಿ ನೀಡಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು, ೆಬ್ರವರಿ ಅಂತ್ಯಕ್ಕೆ ಕಾಮಗಾರಿ ಆರಂಭಿಸಲಿದ್ದು, ಮಾರ್ಚ್ ಅಂತ್ಯಕ್ಕೆ ಮೇಲ್ಸೇತುವೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

    ಪದೇಪದೆ ಅಪಘಾತ

    ಉಡುಪಿಯಿಂದ-ಮಣಿಪಾಲಕ್ಕೆ ಸಾಗುವ ದ್ವಿಪಥ ರಸ್ತೆ ಮಾರ್ಗದಲ್ಲಿ ಎಂಜಿಎಂ ಕಾಲೇಜಿನ ಮುಂಭಾಗದಿಂದ ಎಲ್ಲ ವಾಹನಗಳು ಬಲಭಾಗಕ್ಕೆ ತಿರುಗಿ, ಮಣಿಪಾಲದಿಂದ ಉಡುಪಿ ಕಡೆಗೆ ಸಾಗುವ ರಸ್ತೆಯಲ್ಲೇ ಸಂಚರಿಸಬೇಕಿತ್ತು. ಹೀಗಾಗಿ ದಿನಪೂರ್ತಿ ಈ ಮಾರ್ಗದಲ್ಲಿ ವಾಹನ ದಟ್ಟಣೆಯಿಂದ ಸವಾರರು ತೊಂದರೆ ಅನುಭವಿಸಬೇಕಿತ್ತು. ಪ್ರತಿದಿನ ಒಂದೆರಡು ಅಪಘಾತ ಮಾಮೂಲು ಎನ್ನುವಂತಾಗಿತ್ತು.

    ಶಾಲೆ ಮಕ್ಕಳ ಪರದಾಟ

    ಇಂದ್ರಾಳಿಯಲ್ಲಿ ಎಡಭಾಗದ ರಸ್ತೆಯಲ್ಲಿ ಇಂದ್ರಾಳಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಇದ್ದು, ವಿದ್ಯಾರ್ಥಿಗಳಿಗೆ ರಸ್ತೆ ದಾಟಿ ಶಾಲೆಗೆ ಹೋಗಲು ಪರದಾಡಬೇಕಿತ್ತು. ತಮ್ಮ ಮಕ್ಕಳನ್ನು ಶಾಲೆಗೆ ಬಿಟ್ಟುಬರಲು ಬೈಕ್ ಅಥವಾ ಕಾರುಗಳ ಮೂಲಕ ಸಗ್ರಿ ಸಂಪರ್ಕಿಸುವ ಒಳರಸ್ತೆಯಲ್ಲಿಯೇ ಪಾಲಕರು ಆಗಮಿಸಬೇಕಿತ್ತು. ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಶಾಲೆ ಬಿಟ್ಟಾಗ ಕೆಲಕಾಲ ಟ್ರಾಫಿಕ್ ಜಾಮ್ ಆಗುತ್ತಿತ್ತು. ಮಕ್ಕಳು ಮನೆ ಸೇರುವವರೆಗೂ ಪಾಲಕರು ಆತಂಕದಲ್ಲೇ ಇರುವಂತಾಗಿತ್ತು.

    ಶಾಸಕ ಯಶ್‌ಪಾಲ್ ಭೇಟಿ

    ಈ ಮಾರ್ಗದಲ್ಲಿ ಸಂಚರಿಸುವ ಜನರು ಶಾಸಕ ಯಶ್‌ಪಾಲ್ ಸುವರ್ಣ ಅವರಲ್ಲಿ ಸಮಸ್ಯೆ ಕುರಿತಂತೆ ದೂರು ನೀಡಿದ್ದರು. ಹೀಗಾಗಿ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ರೈಲ್ವೆ ಇಲಾಖೆಯ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆಯ ಅಧಿಕಾರಿಗಳೊಂದಿಗೆ ಹುಬ್ಬಳ್ಳಿಯಲ್ಲಿರುವ ರೈಲ್ವೆ ವರ್ಕ್‌ಶಾಪ್‌ಗೆ ಯಶ್‌ಪಾಲ್ ಭೇಟಿ ನೀಡಿ ಪರಿಶೀಲಿಸಿದ್ದರು. 2023ರ ಡಿಸೆಂಬರ್ ಅಂತ್ಯಕ್ಕೆ ಗರ್ಡರ್ ಪೂರೈಕೆ ಮಾಡುವ ಭರವಸೆಯನ್ನೂ ನೀಡಿದ್ದರು. ಇದೀಗ ಎರಡು ತಿಂಗಳ ವಿಳಂಬದ ಬಳಿಕ ಉಡುಪಿಗೆ ಗರ್ಡರ್ ಆಗಮಿಸಿದೆ.

    ಗಡುವು ಕಳೆದು ಬಂದ ಗರ್ಡರ್: ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಕ್ಷಣಗಣನೆ

    ದೇಶದ ಗಮನ ಸೆಳೆದಿದ್ದ ಪ್ರತಿಭಟನೆ

    ಇಂದ್ರಾಳಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಿಸದೆ ನಿರ್ಲಕ್ಷ್ಯ ತೋರುತ್ತಿದ್ದ ಜಿಲ್ಲಾಡಳಿತ ಹಾಗೂ ಸರ್ಕಾರದ ಕ್ರಮ ಖಂಡಿಸಿ ಸಮಾಜ ಸೇವಕ ನಿತ್ಯಾನಂದ ಒಳಕಾಡು ವಿಶಿಷ್ಟ ಪ್ರತಿಭಟನೆ ನಡೆಸಿದ್ದರು. ಜುಲೈ ತಿಂಗಳಲ್ಲಿ ಮಳೆ ನೀರಿನಿಂದಾಗಿ ಕೆಸರುಮಯವಾಗಿದ್ದ ಹಾಗೂ ರಸ್ತೆಯ ಬೃಹತ್ ಗುಂಡಿಗಳಲ್ಲಿ ಉರುಳು ಸೇವೆ ಮಾಡಿದ್ದರು. ಸುರಿಯುವ ಮಳೆಯಲ್ಲೇ ಏಕಾಂಗಿಯಾಗಿ ನಡೆಸಿದ್ದ ಪ್ರತಿಭಟನೆ, ದಿಲ್ಲಿಯ ಪ್ರಧಾನಿ ಕಚೇರಿಯ ಗಮನವನ್ನೂ ಸೆಳೆದಿತ್ತು. ಬಳಿಕ ಅಕ್ಟೋಬರ್ 2ರಂದು, ಸ್ವಚ್ಛ ಭಾರತ ಅಭಿಯಾನದ ಪ್ರಯುಕ್ತ ಇಂದ್ರಾಳಿಯಲ್ಲಿ ಅಳವಡಿಸಿದ್ದ ಕಬ್ಬಿಣದ ರಾಡ್‌ಗಳಿಗೆ ಪೇಂಟ್ ಮಾಡುವ ಮೂಲಕವೂ ನಿತ್ಯಾನಂದ ಒಳಕಾಡು ಪ್ರತಿಭಟಿಸಿದ್ದರು.

    ಉಡುಪಿ ಜನತೆಯ ಬಹು ಬೇಡಿಕೆಯಾಗಿದ್ದ ಹಾಗೂ ಸುಗಮ ಸಂಚಾರಕ್ಕೆ ಸಮಸ್ಯೆಯಾಗಿ ಕಾಡುತ್ತಿದ್ದ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಈ ಕಾಮಗಾರಿಗೆ ಸಹಕರಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್, ಸ್ಥಳೀಯ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
    -ಯಶ್‌ಪಾಲ್ ಸುವರ್ಣ ಉಡುಪಿ ಶಾಸಕ

    ಇಂದ್ರಾಳಿಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸಲು ಹುಬ್ಬಳ್ಳಿಯಿಂದ ಸ್ಟೀಲ್ ಗರ್ಡರ್ ಆಗಮಿಸಿದೆ. ಎನ್‌ಎಚ್ ಅಧಿಕಾರಿಗಳು ಕೆಲಸ ಆರಂಭಿಸಿದರೆ 20 ದಿನದಲ್ಲಿ ಪೂರ್ಣಗೊಳ್ಳಲಿದೆ. 9.5 ಕೋ.ರೂ. ವೆಚ್ಚದ ಈ ಸೇತುವೆ ಮಾರ್ಚ್ ಅಂತ್ಯಕ್ಕೆ ಸಿದ್ಧವಾಗಬಹುದೆಂದು ನಿರೀಕ್ಷಿಸಿದ್ದೇವೆ.

    -ಡಾ.ಕೆ.ವಿದ್ಯಾಕುಮಾರಿ ಜಿಲ್ಲಾಧಿಕಾರಿ ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts