ಕುಂದಾಪುರ: 'ಕನಸಲ್ಲೂ ಇಂಥದ್ದೊಂದು ಮನಿ ಆತ್ ಅಂದೇಳಿ ಎಣಿಸಿಯೇ ಇರ್ಲಿಲ್ಲ... ಅಯ್ಯೋ ಪಾಪ ಅಜ್ಜಿಗೊಂದು ಮನಿ ಆಯ್ಕ್ ಅಂದೇಳಿ ಮನಿ ಕಟ್ಟಿಕೊಟ್ರಲ್ದೆ, ಅವ್ರ್ ದೇವ್ರ್ ಇದ್ದಂಗೆ. ಇದ್ಕೂ ಹೆಚ್ಚಿಗೆ ಹೇಳೂಕೆ ನಂಗೆ ಬತ್ತಿಲ್ಲ. ಮನಿ ಕಟ್ಟುಕ್ ಮುಂದ್ ಬಂದ್ರಲ್ದ ಅವರಿಗೆ ದೇವ್ರ್ ಒಳ್ಳೇದ್ ಮಾಡ್ಕ್, ಈ ಅಜ್ಜಿಹತ್ರ ಇಷ್ಟೇ ಹೇಳುಕಾಪ್ದು..'
ನಾಡಾ ಗ್ರಾಮ ತೆಂಗಬೈಲು ಗೋಳಿಹಕ್ಲು ನಿವಾಸಿ ಚಂದ್ರು ಪೂಜಾರ್ತಿ ಮೊಗದಲ್ಲಿ ಈಗ ಧನ್ಯತಾ ಭಾವ, ಕಣ್ಣಲ್ಲಿ ಕೃತಜ್ಞತೆ ಬಿಟ್ಟರೆ ಮತ್ತೇನೂ ಕಾಣುವುದಿಲ್ಲ. ಕಳೆದ ಹಲವಾರು ವರ್ಷಗಳಿಂದ ಸೋರುವ, ಬಿರಿದ ಗೋಡೆಗಳ ಮಧ್ಯೆ ಹಿರಿಯ ಜೀವ ಇಲ್ಲಗಳ ನಡುವೆ ವಾಸ ಮಾಡುತ್ತಿದ್ದರು.
ಚಂದು ಅಜ್ಜಿಯ ಮನೆಯ ದುಸ್ಥಿತಿ ಮತ್ತು ಸಂಕಷ್ಟಮಯ ಬದುಕಿನ ಕುರಿತು ವಿಜಯವಾಣಿ ವಿಸ್ತೃತ ವರದಿ ಮಾಡಿತ್ತು. ಬಳಿಕ ನಾಡ ಗ್ರಾಮ ಪಂಚಾಯತ್ ಸದಸ್ಯ ಉದಯ ಜೋಗಿ ಹಾಗೂ ಸಹೃದಯಿಗಳು ಸೇರಿ ಚಂದು ಅಜ್ಜಿ ಹೆಸರಿನ ಸಮಿತಿ ರಚಿಸಿ, ಮನೆ ಕಟ್ಟಿಕೊಡುವ ಸಂಕಲ್ಪ ಮಾಡಿದರು. ನಾವುಂದ ಲಯನ್ಸ್ ಕ್ಲಬ್ ಅಜ್ಜಿ ಮನೆ ಕನಸಿಗೆ ಬೆನ್ನೆಲುಬಾಗಿ ನಿಂತಿತು. ಅಜ್ಜಿ ಮನೆಯ ಸಾಕಾರಕ್ಕೆ ಬೆನ್ನೆಲುಬಾಗಿ ನಿಂತವರು ಅದಷ್ಟೋ ಮಂದಿ. ಕೆಲವರು ಕೆಂಪುಕಲ್ಲು ಕೊಟ್ಟರೆ ಮತ್ತೆ ಕೆಲವರು ಮರಳು ಹಾಗೂ ಇನ್ನಿತರ ಪರಿಕರಗಳನ್ನು ಪೂರೈಸಿದರು. ಹತ್ತು ಕೈಗಳು ಸೇರಿದ್ದರಿಂದ ಆರು ತಿಂಗಳೊಳಗೆ ಚಂದು ಅಜ್ಜಿಗೆ ಚಂದದ ಮನೆ ನಿರ್ಮಾಣವಾಗಿ ಗೃಹ ಪ್ರವೇಶಕ್ಕೆ ಮುಹೂರ್ತ ನಿಗದಿಯಾಗಿದೆ.
ನಾಡಾ ಗ್ರಾಮ ಪಂಚಾಯಿತಿ 1.50 ಲಕ್ಷ ಅನುದಾನ ನೀಡಿ ಅಜ್ಜಿ ಮನೆಗೆ ಗಟ್ಟಿಯಾದ ಫೌಂಡೇಷನ್ ಹಾಕುವ ಕೆಲಸ ಮಾಡಿದರೆ, ಕಟ್ಟಡ ನಿರ್ಮಾಣ ಮಾಡುವವರು ಶ್ರಮದಾನ ಮಾಡಿದರು. ಸಮಾಜದಲ್ಲಿ ಇನ್ನೂ ಮಾನವೀಯತೆ ಉಳಿದಿದೆ ಎನ್ನುವುದಕ್ಕೆ ಈ ಅಜ್ಜಿ ಮನೆ ಸಾಕ್ಷಿ. ಸಂಘ ಸಂಸ್ಥೆಗಳು, ದಾನಿಗಳು, ಊರ ಪರವೂರ ಸಹೃದಯಿಗಳು ಒಟ್ಟಾಗಿ ಅಜ್ಜಿಗೊಂದು ಮನೆ ನಿರ್ಮಿಸಿ ಕೊಟ್ಟು ಈಗ ಗೃಹಪ್ರವೇಶ ಮಾಡಿಸುವ ಉಮೇದಿನಲ್ಲಿದ್ದಾರೆ. ಅಜ್ಜಿ ಮಳೆಗಾಲದಲ್ಲಿ ಬೆಚ್ಚಗಿನ ಗೂಡು ಸೇರುಬೇಕು ಎನ್ನುವ ವಿಜಯವಾಣಿ ಪ್ರಯತ್ನ ಫಲಿಸಿದೆ.
ಚಂದು ಅಜ್ಜಿಗೆ ಯಾವತ್ತೋ ಮನೆ ಆಗಬೇಕಿತ್ತು, ಅದು ಈಗ ಸಾಕಾರಗೊಂಡಿದೆ. ಮನೆ ನಿರ್ಮಾಣಕ್ಕಾಗಿ ಸಂಘ-ಸಂಸ್ಥೆಗಳು, ದಾನಿಗಳು, ಊರ, ಪರವೂರ ಮಹನೀಯರು ಕೈಜೋಡಿಸಿದ ಕಾರಣ ಸಲೀಸಾಯಿತು. ಒಂದು ಹಾಲ್, ಕಿಚನ್ ಅಟ್ಯಾಚ್ಡ್ ಬಾತ್‌ರೂಮ್, ಹೊರ ಮಾಡು ಮಾಡಿದ್ದು, ಮನೆಯಲ್ಲಿ ಗಾಳಿಬೆಳಕು ಸರಾಗ ಇರುವಂತೆ ನೋಡಿಕೊಳ್ಳಲಾಗಿದೆ. ಗೃಹಪ್ರವೇಶವೂ ಸೇರಿ ಐದು ಲಕ್ಷ ರೂ. ವೆಚ್ಚದಲ್ಲಿ ಮನೆ ಕಟ್ಟಲಾಗಿದೆ. ಮರದ ಬದಲು ಕಬ್ಬಿಣದ ರೀಪು ಪಕಾಸಿ ಹಾಕಿ ಗೆದ್ದಲು ಹಿಡಿಯುವ ಅಪಾಯ ತಪ್ಪಿಸಲಾಗಿದೆ. ಈಗ ಮನೆ ನೋಡಿದಾಗ ಖುಷಿಯಷ್ಟೇ ಅಲ್ಲ ಸಾರ್ಥಕತೆಯ ಭಾವ ಮೂಡಿದೆ. | ಉದಯ ಜೋಗಿ, ಸದಸ್ಯ, ಗ್ರಾಮ ಪಂಚಾಯಿತಿ ನಾಡ
ಚಂದು ಅಜ್ಜಿ ಗೃಹಪ್ರವೇಶಕ್ಕೆ ಕಾಲಕೂಡಿ ಬಂದಿದ್ದು, ಬುಧವಾರ ಬಲಿಪೂಜೆಯ ಮೂಲಕ ಪ್ರವೇಶ ಕಾರ್ಯಕ್ರಮ ಆರಂಭವಾಗಲಿದೆ. ಬುಧವಾರ ಬೆಳಗ್ಗೆ ಧಾರ್ಮಿಕ ವಿಧಿವಿಧಾನಗಳ ಮೂಲಕ ಅಜ್ಜಿ ಮನೆ ನಿರ್ಮಿಸಲು ಸಹಕಾರ ನೀಡಿದವರೊಟ್ಟಿಗೆ ಹೊಸ ಮನೆ ಹೊಸಿಲು ದಾಟಿ ಪ್ರವೇಶ ಮಾಡಲಿದ್ದಾರೆ. ಹಾಲುಕ್ಕಿಸಿದ ನಂತರ ಅಜ್ಜಿಗೆ ಗಣ್ಯರು ಮನೆ ಹಸ್ತಾಂತರ ಮಾಡಲಿದ್ದಾರೆ. ಅಮೇಲೆ ದಾನಿಗಳಿಗೆ ಸಾರ್ವಜನಿಕರಿಗೆ ಸಿಹಿ ಊಟ ಇದೆ. ಗುರುವಾರದಿಂದ ಅಜ್ಜಿ ಗುಡಿಸಲು ವಾಸಕ್ಕೆ ಶಾಶ್ವತ ವಿದಾಯ ಹೇಳಿ ಚಂದದ ಮನೆ ನಿವಾಸಿ ಆಗಲಿದ್ದಾರೆ.
ಇದನ್ನೂ ಓದಿ: ಮೂರನೇ ಮಗುವಾದರೆ 5 ಲಕ್ಷ ರೂ. ಕೊಡ್ತಾರಂತೆ!; ಶಿಕ್ಷಣ-ಚಿಕಿತ್ಸೆಯೂ ಉಚಿತ, ಮದ್ವೆ ಖರ್ಚಿಗೂ ಧನಸಹಾಯ: ಇಲ್ಲಿದೆ ವಿವರ..
ನಾಡಾ ಗ್ರಾಮ ತೆಂಕುಬೈಲು ಗೋಳಿಹಕ್ಲು ಚಂದು ಅಜ್ಜಿ ಮನೆಗೆ ಸಂಘ-ಸಂಸ್ಥೆಗಳು, ಸಾರ್ವಜನಿಕರ ಸಹಕಾರದಲ್ಲಿ ಹೆಮ್ಮುಂಜೆ ಮುತ್ತಯ್ಯ ಭಟ್ ಶಿಲಾನ್ಯಾಸ ನಡೆಸಿಕೊಟ್ಟರೆ, ನಾವುಂದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನರಸಿಂಹ ದೇವಾಡಿಗ, ನಾವುಂದ ಲಯನ್ಸ್ ಅಧ್ಯಕ್ಷ ಜಗದೀಶ ಶೆಟ್ಟಿ ಕುದ್ರುಕೋಡು, ಗ್ರಾಪಂ ಸದಸ್ಯ ಉದಯ ಜೋಗಿ, ರಾಜನಾರಾಯಣ ಶೆಟ್ಟಿ ಹೀಗೆ ಸಹಕಾರ ಮಾಡಿದವರ ಪಟ್ಟಿ ದೊಡ್ಡದಿದೆ.