ಬೆಂಗಳೂರು: ವ್ಹೀಲಿಂಗ್ ಮಾಡಲು, ಬಾಲಕರ ಜತೆ ಸೇರಿ ಮನೆಗಳ ಮುಂದೆ ನಿಲ್ಲಿಸಿದ್ದ ಬೈಕ್‌ಗಳ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಕೊಡಿಗೆಹಳ್ಳಿ ಪೊಲೀಸರ ಆರೋಪಿಯಿಂದ 8.5 ಲಕ್ಷ ಮೌಲ್ಯದ 17 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ವಿದ್ಯಾರಣ್ಯ ಪುರದ ಶರತ್ ಕಾಂತರಾಜ್ಕುಮಾರ್ (22) ಬಂಧಿತ ಆರೋಪಿ. ವ್ಹೀಲಿಂಗ್ ಚಟಕ್ಕೆ ಬಿದಿದ್ದ ಆರೋಪಿ ಶರತ್, ಐವರು ಬಾಲಕರ ತಂಡವೊಂದನ್ನು ಕಟ್ಟಿಕೊಂಡು ಕಂಡ ಕಂಡವರ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ.
ಕೊಡಿಗೆಹಳ್ಳಿ, ಮಾಗಡಿರೋಡ್, ಬಸವೇಶ್ವರನಗರ, ಚಾಮರಾಜಪೇಟೆ, ವಿದ್ಯಾರಣ್ಯಪುರ ಸೇರಿ ಹಲವು ಕಡೆ ದ್ವಿಚಕ್ರ ವಾಹನ ಕಳ್ಳತನ ಮಾಡಿದ್ದ.
ಏಪ್ರಿಲ್ 30ರ ತಡರಾತ್ರಿ ನಾಕಬಂದಿ ಹಾಕಿ ಪೊಲೀಸರು ತಪಾಸಣೆ ನಡೆಸುವ ವೇಳೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಶರತ್ ಪೊಲೀಸರನ್ನು ನೋಡಿ ಪರಾರಿಯಾಗಲು ಯತ್ನಿಸಿದ್ದ. ಈ ಬಗ್ಗೆ ಅನುಮಾನಗೊಂಡು ಪೊಲೀಸರು ಆತನನ್ನು ಹಿಂಬಾಲಿಸಿ ಹಿಡಿದು ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ದ್ವಿಚಕ್ರ ವಾಹಗಳ ಕಳ್ಳತನ ಕೃತ್ಯಗಳು ಬಯಲಿಗೆ ಬಂದಿವೆ. ಬಳಿಕ ಈತನ ಮಾಹಿತಿ ಆದರಿಸಿ ಐವರು ಬಾಲಕರ ಅಭಿರಕ್ಷೆಗೆ ಪಡೆದು ವಿಚಾರಣೆ ಮಾಡಲಾಗಿದೆ. ಆರೋಪಿಯ ಬಂಧನದಿಂದ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 12 ಪ್ರಕರಣಗಳು ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.