ಊಟದ ವೇಳೆ ಬಿಸಿ ಪೂರಿ ಬಡಿಸಲಿಲ್ಲ ಎಂದು ತಗಾದೆ; ಮದುವೆ ಮನೆಯಲ್ಲಿ ಕಲ್ಲು ತೂರಾಟ

puri
Published on

ರಾಂಚಿ: ಮನೆ ಕಟ್ಟಿ ನೋಡು ಒಮ್ಮೆ ಮದುವೆ ಮಾಡಿ ನೋಡು ಎನ್ನುತ್ತಾರೆ. ಇವೆರಡು ಜೀವನದ ಪ್ರಮುಖ ಘಟ್ಟವಾಗಿದ್ದು ನಮ್ಮ ಜೀವನದಲ್ಲಿ ಶಾಶ್ವತವಾಗಿ ನೆನಪುಳಿಯುತ್ತವೆ.

ಇನ್ನು ಶುಭ ಸಮಾರಂಭದ ವೇಳೆ ಕೆಲ ಅಹಿತಕರ ಹಾಗೂ ಕಹಿ ಘಟನೆಗಳು ಸಹ ನಡೆಯುತ್ತವೆ ಅದಕ್ಕೆ ಪೂರಕವೆಂಬಂತೆ ಜಾರ್ಖಂಡ್​ನ ರಾಂಚಿಯಲ್ಲಿ ನಡೆದಿದೆ.

ಆಹಾರದ ವಿಚಾರಕ್ಕೆ ಗಲಾಟೆ

ಮಂಗಳವಾರ ಸಂಜೆ ಮುಫಾಸಿಲ್​ ಠಾಣೆ ವ್ಯಾಪ್ತಿಯ ಪಟರೋಡಿ ಪ್ರದೇಶದಲ್ಲಿ ಶಂಕರ್​ ಯಾದವ್​ ಎಂಬುವವರ ಮದುವೆ ಕಾರ್ಯಕ್ರಮಕ್ಕೆ ತಡರಾತ್ರಿ ಆಗಮಿಸಿದ ಯುವಕರ ಗುಂಪೊಂದು ಆಹಾರದ ವಿಚಾರವಾಗಿ ಗಲಾಟೆ ಮಾಡಿದ್ದು ಇದು ದೊಡ್ಡ ಮಟ್ಟದ ಹೊಡೆದಾಟಕ್ಕೆ ಕಾರಣವಾಗಿದೆ.

ಮದುವೆ ಮನೆಗೆ ನುಗ್ಗಿದ ಯುವಕರ ತಂಡವೊಂದು ಊಟ ಮಾಡುವ ವೇಳೆ ತಮಗೆ ಬಿಸಿ ಬಿಸಿ ಪೂರಿ ಬೇಕು ಎಂದು ಗಲಾಟೆ ತೆಗೆದಿದ್ದಾರೆ. ಮದುವೆ ಮನೆಯಲ್ಲಿ ಇವರ ಮಾತಿಗೆ ಯಾರು ಸೊಪ್ಪು ಹಾಕದ ಕಾರಣ ಪೋನ್​ ಮಾಡಿ ಮತ್ತೊಂದು ಗುಂಪನ್ನು ಕರೆಸಿಕೊಂಡಿದ್ದಾರೆ.

ಕಲ್ಲು ತೂರಾಟ

ಬಳಿಕ ಮದುವೆ ಮನೆಗೆ ಆಗಮಿಸಿದ ಯುವಕರ ತಂಡವೊಂದು ಅಲ್ಲಿ ನೆರದಿದ್ದವರನ್ನು ನಿಂದಿಸಲು ಪ್ರಾರಂಭಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು ಇದರ ಪರಿಣಾಮವಾಗಿ ಮೂರರಿಂದ ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ ಗಾಯಾಳುಗಳನ್ನು ಆಸ್ಪತ್ರಗೆ ದಾಖಲಿಸಿದ್ದಾರೆ. ಘಟನೆಗೆ ಕಾರಣವಾದ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿರುವ ಪೊಲೀಸರು ಉಳಿದವರಿಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net