ಜಿಲ್ಲೆ

ರಾತ್ರಿ ಪಾಳಿಯಲ್ಲಿ ನಿದ್ರಿಸುತ್ತಿದ್ದ ಪೊಲೀಸರಿಬ್ಬರ ಅಮಾನತು!

ಬೆಂಗಳೂರು: ರಾತ್ರಿ ಪಾಳಿಯಲ್ಲಿ ನಿದ್ರಿಸುತ್ತಿದ್ದ ಹೆಡ್ ಕಾನ್‌ಸ್ಟೆಬಲ್ ಹಾಗೂ ಕಾನ್‌ಸ್ಟೆಬಲ್ ಅವರನ್ನು ಕರ್ತವ್ಯಲೋಪದ ಆರೋಪದಡಿ ಅಮಾನತುಗೊಳಿಸಿ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಎಸ್.ಗಿರೀಶ್ ಆದೇಶಿಸಿದ್ದಾರೆ. ಮಹದೇವಪುರ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಎ.ಎನ್.ಜಯರಾಮ್ ಹಾಗೂ ಕಾನ್‌ಸ್ಟೆಬಲ್ ಈರಪ್ಪ ಉಂಡಿ ಅಮಾನತಿಗೊಳಗಾದವರು.

ಜು.9ರ ರಾತ್ರಿ ಠಾಣೆಯ ಎಸ್‌ಎಚ್‌ಒ ಪ್ರಭಾರದಲ್ಲಿದ್ದಾಗ ಈ ಇಬ್ಬರು ಸಿಬ್ಬಂದಿ ರಾತ್ರಿ ಪಾಳಿಯಲ್ಲಿದ್ದರು. ಡಿಸಿಪಿಯವರು ಠಾಣೆಗೆ ಭೇಟಿ ನೀಡಿದಾಗ ಇಬ್ಬರೂ ನಿದ್ರಿಸುತ್ತಿರುವುದು ಕಂಡು ಬಂದಿದೆ.

ಆಗ ಸೆಂಟ್ರಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ಹೆಸರನ್ನು ಕೇಳಿದಾಗ, ಗೊತ್ತಿಲ್ಲ ಎಂದು ಉತ್ತರಿಸಿರುವುದರಿಂದ, ಶಿಸ್ತಿನ ಇಲಾಖೆಯ ನೌಕರರಾಗಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನ ಪ್ರದರ್ಶಿಸಿದ ಆರೋಪದಡಿ ಇಬ್ಬರನ್ನೂ ತಕ್ಷಣವೇ ಅಮಾನತುಗೊಳಿಸಿ ಡಿಸಿಪಿ ಎಸ್.ಗಿರೀಶ್ ಆದೇಶಿಸಿದ್ದಾರೆ.