ಜಿಲ್ಲೆ

ಇನ್ಸ್​​ಟಾಗ್ರಾಂನಲ್ಲಿ ಪರಿಚಯವಾಗಿದ್ದ ಯುವಕನನ್ನು ಭೇಟಿಯಾಗಲು ಬಂದ ಮಹಿಳೆಗೆ ಕಾದಿತ್ತು ಶಾಕ್​

Webdesk - Manjunatha B

ಬೆಂಗಳೂರು: ಇನ್ಸ್​​ಟಾಗ್ರಾಂನಲ್ಲಿ ಪರಿಚಯವಾಗಿದ್ದ ಯುವಕನನ್ನು ಭೇಟಿ ಮಾಡಲು ಬಂದಿದ್ದ ಮಹಿಳೆ ಬಳಿ ರಾಬರಿ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆರೋಪಿ ಮಹಾಂತೇಶ್​​(19)ನನ್ನು ಭೇಟಿ ಮಾಡಲು 36 ವರ್ಷದ ಮಹಿಳೆಯೊಬ್ಬರು ಬಂದಿದ್ದರು. ಈ ವೇಳೆ ಇಬ್ಬರು ಕಳ್ಳರು ಬಂದು ರಾಬರಿ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಬನ್ನೇರುಘಟ್ಟ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣದ ಹಿನ್ನಲೆ?

36 ವರ್ಷದ ಮಹಿಳೆಯೊಬ್ಬರಿಗೆ ಇನ್ಸ್​​ಟಾಗ್ರಾಂನಲ್ಲಿ ಮಹಾಂತೇಶ್​​ ಎಂಬ ಯುವಕನ ಪರಿಚಯವಾಗಿದೆ. ದಿನ ಕಳೆದಂತೆ ಇಬ್ಬರ ನಡುವೆ ಆತ್ಮೀಯತೆ ಬೆಳೆದಿದ್ದು, ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಲು ನಿರ್ಧರಿಸಿದ್ದರು.

ಕೃತ್ಯ ನಡೆದ ಸ್ಥಳ

ಅದರಂತೆ ಜುಲೈ 12ರಂದು ಮಹಿಳೆ ಮಹಾಂತೇಶ್​ನನ್ನು ಬನ್ನೇರುಘಟ್ಟ ಬಳಿ ಇರುವ ಚಂಪಕಧಾಮಸ್ವಾಮಿ ದೇವಾಲಯದಲ್ಲಿ ಭೇಟಿಯಾಗಲು ಬಂದಿದ್ದರು. ದೇವರ ದರ್ಶನದ ಬಳಿಕ ಹೊರಗಡೆ ಇದ್ದ ಬಂಡೆ ಬಳಿ ಇಬ್ಬರು ಕುಳಿತಿದ್ದ ವೇಳೆ ಸುರೇಶ್ (23) ಹಾಗೂ ಗುರು(24) ಎಂಟ್ರಿ ಕೊಟ್ಟಿದ್ದಾರೆ.

ಬೆದರಿಸಿ ಸುಲಿಗೆ

ಆರೋಪಿಗಳಿಬ್ಬರು ಮದುವೆಯಾಗಿದ್ದರು ಪರಪುರುಷನ ಜೊತೆ ಓಡಾಡುತ್ತಿರುವುದನ್ನು ವಿಡಿಯೋ ಮಾಡಿಕೊಂಡಿದ್ದು, ನಿಮ್ಮ ಕುಟುಂಬಸ್ಥರಿಗೆ ತಿಳಿಸುವುದಾಗಿ ಬೆದರಿಸಿದ್ದಾರೆ. ಬಳಿಕ ಯುವಕ ಮಹಾಂತೇಶ್​ಗೆ ಪೊಲೀಸರಿಗೆ ಹೇಳಿ ಜೈಲಿಗೆ ಹಾಕಿಸುತ್ತೇವೆಂದು ಹೇಳಿ ಇಬ್ಬರ ಬಳಿ ಇದ್ದ ಮೊಬೈಲ್​., 10 ಸಾವಿರ ಹಣ ಹಾಗೂ ಚಿನ್ನದ ಆಭರಣಗಳನ್ನು ದೋಚಿ ಪರಾರಿಯಾಗಿದ್ದರು.

ಈ ಸಂಬಂಧ ಮಹಿಳೆ ಹಾಗೂ ಯುವಕ ಇಬ್ಬರು ಬನ್ನೇರುಘಟ್ಟ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಲೆಮಾರಿಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಬಂಧಿತರಿಂದ 30 ಗ್ರಾಂ ಚಿನ್ನದ ಸರ, 10 ಸಾವಿರ ರೂಪಾಯಿ ನಗದು ಹಾಗೂ ಮೊಬೈಲ್​ ಫೋನ್​ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದು ಮಾಲೀಕರಿಗೆ ಹಿಂತಿರುಗಿಸಿದ್ದಾರೆ.