ಬೆಂಗಳೂರು: ಕುಡಿದ ಮತ್ತಿನಲ್ಲಿ ಗುಂಪು ಘರ್ಷಣೆಯಲ್ಲಿ ಪಾಲ್ಗೊಂಡಿದ್ದಲ್ಲದೆ, ಸಿವಿಲ್ ಕಾಂಟ್ರಾಕ್ಟರ್ ಒಬ್ಬರ ತಲೆಗೆ ಹೆಲ್ಮೆಟ್ನಲ್ಲಿ ಹೊಡೆದು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಸವೇಶ್ವರನಗರ ಸಿವಿಲ್ ಕಾಂಟ್ರಾಕ್ಟರ್ ಬಾಲಾಜಿ (49) ಗುರುವಾರ ರಾತ್ರಿ ಹತ್ಯೆಗೀಡಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಚುರುಕಿನ ಕಾರ್ಯಾಚರಣೆ ನಡೆಸಿದ ಪೊಲೀಸರು ನಾಗರಾಜ್ ಹಾಗೂ ಮಹೇಶ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಮತ್ತು ಕೊಲೆಯಾದ ವ್ಯಕ್ತಿ ಮಾಗಡಿ ರಸ್ತೆ ಠಾಣಾ ವ್ಯಾಪ್ತಿಯ ಬಾರ್ ಒಂದರಲ್ಲಿ ಮದ್ಯಪಾನ ಮಾಡಿದ್ದರು. ಬಾರಿನಿಂದ ಆಚೆ ಬರುವಾಗ ‘ಯಾಕೋ ಗುರಾಯಿಸ್ತಿಯಾ’ ಎಂದು ಹೇಳಿ ಗಲಾಟೆ ತೆಗೆದಿದ್ದರು. ಸ್ಥಳದಲ್ಲಿ ಇದ್ದವರೆಲ್ಲ ಸೇರ್ಕೊಂಡು ಗಲಾಟೆ ಬಿಡಿಸಿ ಕಳುಹಿಸಿದ್ದರು. ಬಳಿಕ ಎರಡೂ ಗುಂಪು ಅಲ್ಲಿಂದ ಹೊರಟಿತ್ತು.
ಇದನ್ನೂ ಓದಿ: ‘ರಾಣಿ’ಯನ್ನು ಕೊಂದು ಹೂತಿಟ್ಟ ಭೂಪ; ದೇವಸ್ಥಾನದಲ್ಲೂ ಕದ್ದು ಸಿಕ್ಕಿಬಿದ್ದ; ಇಂದು ಆಕೆಯ ಶವ ಹೊರತೆಗೆದ ಪೊಲೀಸರು..
ಆದರೆ ಮಳೆ ಬಂದ ಕಾರಣಕ್ಕೆ ಬಾಲಾಜಿ ಮತ್ತು ಸ್ನೇಹಿತರು ಮಾರ್ಗ ಮಧ್ಯೆ ನಿಂತಿದ್ದರು. ಇದೇ ವೇಳೆ ಮತ್ತೆ ಅಲ್ಲಿಗೆ ಬಂದ ಆರೋಪಿಗಳು ಜಗಳ ಆರಂಭಿಸಿದರು. ಆಗ ಓರ್ವ ಹೆಲ್ಮೆಟ್ನಿಂದ ಬಾಲಾಜಿ ತಲೆಗೆ ಹೊಡೆದು ಕೊಲೆ ಮಾಡಿದ್ದ. ಈ ಸಂಬಂಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.