ಬೆಂಗಳೂರು: ಕದ್ದ ಕೆಟಿಎಂ ಡ್ಯೂಕ್ ಬೈಕ್‌ನಲ್ಲಿ ನಗರದ ವಿವಿಧೆಡೆ ಸುತ್ತಾಡಿ ಒಂಟಿ ಮಹಿಳೆಯರನ್ನು ಗುರಿಯಾಗಿಸಿ ಸರಗಳ್ಳತನ ನಡೆಸುತ್ತಿದ್ದ ಮೂವರು ಕುಖ್ಯಾತ ಕಳ್ಳರನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ. ಮುಂಬೈ ಮೂಲದ ಪ್ರಸನ್ನ (32), ಉತ್ತರ ಪ್ರದೇಶ ಲಕ್ನೋ ಮೂಲದ ಮೊಹಮ್ಮದ್ ತಾರೀಕ್ (34), ಜಮೀಲ್ (34) ಬಂಧಿತರು.
ಬಂಧಿತರಿಂದ 6.2 ಲಕ್ಷ ರೂ. ಬೆಲೆ ಬಾಳುವ 139 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರಗಳು ಹಾಗೂ ಕೆಟಿಎಂ ಡ್ಯೂಕ್ ದ್ವಿಚಕವಾಹನ ಜಪ್ತಿ ಮಾಡಲಾಗಿದೆ. ಆರೋಪಿಗಳ ಬಂಧನದಿಂದ ಸಂಜಯನಗರ ಪೊಲೀಸ್ ಠಾಣೆಯ 2, ಅಮೃತಹಳ್ಳಿ ಪೊಲೀಸ್ ಠಾಣೆಯ 1, ಮೈಕೋಲೇಔಟ್ ಪೊಲೀಸ್ ಠಾಣೆಯ 1 ಸೇರಿ ಒಟ್ಟು 5 ಪ್ರಕರಣಗಳು ಬೆಳಕಿಗೆ ಬಂದಿದೆ.
ಪ್ರಸನ್ನ ರಸ್ತೆ ಬದಿಯಲ್ಲಿ ಇಡ್ಲಿ ವ್ಯಾಪಾರ ಮಾಡಿಕೊಂಡಿದ್ದು, ನಂತರ ಏರ್‌ಲೈನ್ ಕ್ಯಾಂಟೀನ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ಲಾಕ್‌ಡೌನ್ ಸಮಯದಲ್ಲಿ ಕೆಲಸದಿಂದ ತೆಗೆದು ಹಾಕಿದಾಗ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದು ಬಿಟಿಎಂ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ಸ್ನೇಹಿತನ ಜತೆ ವಾಸಿಸುತ್ತಿದ್ದ. ತರಕಾರಿ ವ್ಯವಹಾರ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ.
ಮುಂಬೈನಲ್ಲಿ ತನಗೆ ಪರಿಚಯವಿದ್ದ ಮೊಹಮ್ಮದ್ ತಾರೀಕ್‌ಗೆ ಕರೆ ಮಾಡಿ ಬೆಂಗಳೂರಿಗೆ ಮತ್ತೊಬ್ಬನನ್ನು ಕರೆದುಕೊಂಡು ಬರುವಂತೆ ಸೂಚಿಸಿದ್ದ. ಇಲ್ಲಿ ಸುಲಭವಾಗಿ ಕಳ್ಳತನ ಮಾಡಿ ಹಣ ಗಳಿಸಬಹುದು ಎಂದು ಹೇಳಿದ್ದ. ಅದರಂತೆ ತಾರೀಕ್ ಸ್ನೇಹಿತ ಜಮೀಲ್‌ನನ್ನು ಕರೆದುಕೊಂಡು ರೈಲಿನಲ್ಲಿ ಬೆಂಗಳೂರಿಗೆ ಬಂದಿದ್ದ. ಇವರಿಗೆ ಉಳಿದುಕೊಳ್ಳಲು ಪ್ರಸನ್ನ ಲಾಡ್ಜ್‌ನಲ್ಲಿ ವ್ಯವಸ್ಥೆ ಮಾಡಿಕೊಟ್ಟಿದ್ದ.
ಸರಗಳ್ಳತನ ಮಾಡಲೆಂದೇ ಪ್ರಸನ್ನ ಆರ್‌ಟಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಟಿಎಂ ಡ್ಯೂಕ್‌ನ್ನು ಕಳ್ಳತನ ಮಾಡಿ ಇದರ ನಂಬರ್ ಪ್ಲೇಟ್ ಬದಲಾವಣೆ ಮಾಡಿಕೊಂಡಿದ್ದ. ಮೂವರು ಜತೆಯಾಗಿ ಕದ್ದ ಬೈಕ್‌ನಲ್ಲಿ ನಗರದ ವಿವಿಧೆಡೆ ಸುತ್ತಾಡಿ ಒಂಟಿ ಮಹಿಳೆಯರ ಕತ್ತಿನಲ್ಲಿರುವ ಚಿನ್ನದ ಸರ ಕಸಿದು ಪರಾರಿಯಾಗುತ್ತಿದ್ದರು.
ಸಂಜಯ್‌ನಗರದ ಗೆದ್ದಹಳ್ಳಿಯ ನಿವಾಸಿ ಜಯಮ್ಮ (43) ಡಾಲರ್ಸ್ ಕಾಲನಿಯಲ್ಲಿ ಮನೆ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು. ಆ.17ರಂದು ಬೆಳಗ್ಗೆ 8.30ರಲ್ಲಿ ಮನೆಗೆ ಕೆಲಸಕ್ಕೆಂದು ಡಾಲರ್ಸ್ ಕಾಲನಿಯ 80 ಅಡಿ ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಆರೋಪಿ ಪ್ರಸನ್ನ ಮತ್ತು ತಾರೀಕ್ ಬೈಕ್‌ನಲ್ಲಿ ಇವರನ್ನು ಹಿಂಬಾಲಿಸಿಕೊಂಡು ಬಂದು ಮಾಂಗಲ್ಯ ಸರ ಕಸಿದುಕೊಂಡಿದ್ದರು. ಈ ಬಗ್ಗೆ ಸಂಜಯನಗರ ಪೊಲೀಸ್ ಠಾಣೆಗೆ ಜಯಮ್ಮ ದೂರು ನೀಡಿದ್ದರು.
ಇದನ್ನೂ ಓದಿ: ಎರಡನೇ ಮದ್ವೆಯಾಗಿ ಹೊಸ ಜೀವನದ ಕನಸು ಕಂಡಿದ್ದವಳು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ಯಾಗ್ ಕದ್ದು ಜೈಲುಪಾಲಾದ್ಲು…
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೃತ್ಯ ನಡೆದ ಸ್ಥಳದ ಅಕ್ಕಪಕ್ಕದಲ್ಲಿನ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಗಳು ಬಿಟಿಎಂ ಲೇಔಟ್ ಕಡೆ ಹೋಗಿರುವ ಸುಳಿವು ಸಿಕ್ಕಿತ್ತು. ತಾಂತ್ರಿಕ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಆ.30ರಂದು ಮನೆಯೊಂದರ ಮುಂದೆ ಆರೋಪಿಗಳ ಬೈಕ್ ನಿಂತಿರುವುದು ಕಂಡು ಬಂದಿತ್ತು. ತಕ್ಷಣ ಮನೆಯನ್ನು ಪರಿಶೀಲಿಸಿದಾಗ ಪ್ರಸನ್ನ ಮತ್ತು ತಾರೀಕ್ ಸಿಕ್ಕಿಬಿದ್ದಿದ್ದರು. ಇವರು ಕೊಟ್ಟ ಮಾಹಿತಿ ಮೇರೆಗೆ ಜಮೀಲ್‌ನನ್ನು ವಶಕ್ಕೆ ಪಡೆದಿದ್ದಾರೆ.
ಪ್ರಸನ್ನ ವಿರುದ್ಧ ಮುಂಬೈ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ 18 ಸರಗಳ್ಳತನ ಪ್ರಕರಣ ದಾಖಲಾಗಿರುವುದು ಗೊತ್ತಾಗಿದೆ. ಕಳ್ಳತನ ಕೇಸ್‌ನಲ್ಲಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರ ಬಂದಿದ್ದ. ತಾರಿಕ್ ಕೆಲಸ ಹುಡುಕಿಕೊಂಡು ಮುಂಬೈಗೆ ಬಂದಿದ್ದಾಗ ಪ್ರಸನ್ನ ಪರಿಚಯವಾಗಿದ್ದ.