ಜಿಲ್ಲೆ

ಒಂದು ಭೀಕರ ಅಪಘಾತ, ಮೂವರ ಸಾವು: ಆರೋಪಿ ತಲೆಮರೆಸಿಕೊಂಡಿದ್ದು ಬರೋಬ್ಬರಿ 16 ವರ್ಷ!

ತುಮಕೂರು: ಒಂದು ಭೀಕರ ಅಪಘಾತದ ಮೂಲಕ ಮೂವರ ಸಾವಿಗೆ ಹಾಗೂ ಹಲವರು ಗಾಯಗೊಳ್ಳಲು ಕಾರಣನಾಗಿದ್ದ ಈ ಆರೋಪಿ ಸಿಕ್ಕಿಬಿದ್ದಿದ್ದರೂ ನಂತರ ಮತ್ತೆ ತಲೆಮರೆಸಿಕೊಂಡಿದ್ದ. ಹೀಗೆ ಬರೋಬ್ಬರಿ 16 ವರ್ಷಗಳ ಕಾಲ ಕದ್ದುಮುಚ್ಚಿ ಓಡಾಡುತ್ತಿದ್ದ ಈತ ಕೊನೆಗೂ ಸಿಕ್ಕಿಬಿದ್ದಿದ್ದಾನೆ.

ಲಾರಿ ಚಾಲಕ ರಾಮದಾರ್ ಜೈಸ್ವಾರ್ ಬಂಧಿತ ಆರೋಪಿ. ಉತ್ತರಪ್ರದೇಶದ ಈತನಿಂದಾಗಿ 2006ರಲ್ಲಿ ಶಿರಾ ಹಿರಿಯೂರು ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಟೆಂಪೋ ಟ್ರ್ಯಾಕ್ಸ್-ಲಾರಿ ನಡುವೆ ಅಪಘಾತ ಸಂಭವಿಸಿತ್ತು. ಅಂದರೆ ಪ್ರಯಾಣಿಕರನ್ನು ಇಳಿಸುತ್ತಿದ್ದ ಟೆಂಪೋಟ್ರ್ಯಾಕ್ಸ್​ಗೆ ಈತ ಚಲಾಯಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದಿತ್ತು.

ಪರಿಣಾಮವಾಗಿ ಪಶುವೈದ್ಯರೊಬ್ಬರು ಸೇರಿ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದರು. ಮಾತ್ರವಲ್ಲ 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಪ್ರಕರಣ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಳಿಕ ಈ ಆರೋಪಿಯನ್ನು ಬಂಧಿಸಿದ್ದರು.

ನಂತರ ಜಾಮೀನಿನ ಮೇಲೆ ಹೊರಬಂದ ಈತ ತಲೆಮರೆಸಿಕೊಂಡಿದ್ದ. ಈತನ ಪತ್ತೆಗೆ ವಿಶೇಷ ತಂಡ ರಚಿಸಿ ಹುಡುಕಾಟ ಆರಂಭಿಸಲಾಗಿತ್ತು. ಆದರೆ ಪೊಲೀಸರು ಎಷ್ಟೇ ಹುಡುಕಾಟ ನಡೆಸಿದರೂ ಈತನ ಸುಳಿವೇ ಸಿಕ್ಕಿರಲಿಲ್ಲ.

ಆದರೆ ಹುಡುಕಾಟ ಮುಂದುವರಿಸಿದ ಪೊಲೀಸರು ಕೊನೆಗೂ ಈತನನ್ನು ಮುಂಬೈನಲ್ಲಿ ಪತ್ತೆ ಹಚ್ಚಿ ಬಂಧಿಸಿ, ಕರೆತಂದಿದ್ದಾರೆ. ಶಿರಾ ಗ್ರಾಮಾಂತರ ಪೊಲೀಸರು ಈ ಆರೋಪಿಯನ್ನು ಬಂಧಿಸಿದ್ದು, ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.