ಜಿಲ್ಲೆ

ಸೂಟು-ಬೂಟು​ ಹಾಕೊಂಡು ಬಂದ, ಮನೆಯವರು ಒಳಗಿರುವಾಗಲೇ ಲ್ಯಾಪ್​ಟಾಪ್​ ಕದ್ದೊಯ್ದ!

ಬೆಂಗಳೂರು: ಮನೆಯವರು ಒಳಗೆ ಇಲ್ಲದ್ದನ್ನು ನೋಡಿ ಕಳವು ಮಾಡುವುದು ಸಹಜ. ಆದರೆ ಇಲ್ಲೊಬ್ಬ ಕಳ್ಳ ಮನೆಯವರು ಒಳಗಿರುವಾಗಲೇ ಮನೆಯಲ್ಲಿದ್ದ ಲ್ಯಾಪ್​ಟಾಪ್​ ಕದ್ದುಕೊಂಡು ಪರಾರಿಯಾಗಿದ್ದಾನೆ. ಗೋವಿಂದಪುರ ಠಾಣಾ ವೀರನಪಾಳ್ಯ ಸೋನಾ ಟವರ್ ಅಪಾರ್ಟ್‌ಮೆಂಟ್ ನಿವಾಸಿ ಸ್ನೇಹಾ ಎಂಬುವವರ ಮನೆಯಲ್ಲಿ ಜು.7ರಂದು ಈ ಕಳ್ಳತನ ನಡೆದಿದೆ. ಗೋವಿಂದಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳನಿಗೆ ಹುಡುಕಾಟ ನಡೆಸುತ್ತಿದ್ದಾರೆ.

ನಗರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ನಡೆಸುತ್ತಿರುವ ಸ್ನೇಹಾ ಅಪಾರ್ಟ್‌ಮೆಂಟ್‌ನ ಮೊದಲನೇ ಮಹಡಿಯಲ್ಲಿ ತಾಯಿಯೊಂದಿಗೆ ವಾಸಿಸುತ್ತಿದ್ದಾರೆ. ಜು.7ರಂದು ಮಧ್ಯಾಹ್ನ 3.30ರಲ್ಲಿ ಬಾಗಿಲು ತೆರೆದಿಟ್ಟು ಬಾಲ್ಕನಿಗೆ ತೆರಳಿದ್ದರು. ಸ್ನೇಹಾ ತಾಯಿ ಬೆಡ್ ರೂಂನಲ್ಲಿ ಮಲಗಿದ್ದರು. ಈ ಸಮಯದಲ್ಲಿ ಸೂಟು-ಬೂಟು ಹಾಕಿ ಅಪಾರ್ಟ್‌ಮೆಂಟ್‌ಗೆ ಎಂಟ್ರಿ ಕೊಟ್ಟ ಕಳ್ಳ ಅಪಾರ್ಟ್‌ಮೆಂಟ್‌ನ ನಾಲ್ಕು ಮಹಡಿಯಲ್ಲೂ ಸುತ್ತಾಡಿದ್ದ. ಆ ವೇಳೆ ಸ್ನೇಹ ಅವರ ಮನೆಯ ಬಾಗಿಲು ತೆರೆದಿರುವುದು ಕಳ್ಳನ ಕಣ್ಣಿಗೆ ಬಿದ್ದಿತ್ತು. ತಡಮಾಡದೇ ಕಿಟಕಿಯಲ್ಲಿ ಇಣುಕಿ ನೋಡಿ ಹಾಲ್​ನಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಮನೆಯೊಳಗೆ ಪ್ರವೇಶಿಸಿದ್ದ. ಡೈನಿಂಗ್ ಟೇಬಲ್​ನಲ್ಲಿ ಇಟ್ಟಿದ್ದ ಲ್ಯಾಪ್‌ಟಾಪ್‌ನ್ನು ತೆಗೆದುಕೊಂಡು ಕ್ಷಣ ಮಾತ್ರದಲ್ಲಿ ಪರಾರಿಯಾಗಿದ್ದಾನೆ.

ಇದಾದ ಕೆಲ ಸಮಯದ ಬಳಿಕ ಸ್ನೇಹ ಲ್ಯಾಪ್‌ಟಾಪ್‌ಅನ್ನು ಮನೆಯಲ್ಲೆಲ್ಲ ಹುಡುಕಿದರೂ ಸಿಕ್ಕಿರಲಿಲ್ಲ. ಅನುಮಾನ ಬಂದು ಮನೆಯ ಹೊರಗೆ ಅಳವಡಿಸಿದ್ದ ಸಿಸಿಕ್ಯಾಮರಾ ಪರಿಶೀಲಿಸಿದಾಗ ಒಂಟಿ ಕಳ್ಳನ ಕೃತ್ಯ ಬಯಲಾಗಿದೆ. ಕೂಡಲೇ ಈ ಬಗ್ಗೆ ಸ್ನೇಹ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.