ಶಿವಮೊಗ್ಗ: ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಯುವಕನೊಬ್ಬನಿಗೆ ಗುರುವಾರ ಸಾಗರದ ಐದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 60 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.
ಸಾಗರ ಪಟ್ಟಣದ ರಾಮನಗರದ ಅನಿಲ್ ಅಲಿಯಾಸ್ ಅನಿಲ್ ಡಿಸೋಜಾ (26) ಶಿಕ್ಷೆಗೆ ಒಳಗಾದವ. ಈತ 2017ರ ಏ.17ರಂದು ಹೋಟೆಲ್ ಕೆಲಸಕ್ಕೆಂದು ಮಹಿಳೆಯನ್ನು ಆಟೋದಲ್ಲಿ ಕರೆದೊಯ್ದು ಅತ್ಯಾಚಾರವೆಸಗಿದ್ದ. ಕೃತ್ಯದ ಬಗ್ಗೆ ಬಾಯ್ಬಿಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದ.
ಇದನ್ನೂ ಓದಿ: ಒಮಿಕ್ರಾನ್ ಇಫೆಕ್ಟ್, ಹೊರಬಿತ್ತು ಮತ್ತೊಂದು ಆದೇಶ; ಜ. 31ರವರೆಗೂ ಇಲ್ಲ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಅವಕಾಶ…
ಈ ನಡುವೆ ಮಹಿಳೆ ಗರ್ಭಿಣಿಯಾಗಿದ್ದು 2017ರ ಅ.15ರಂದು ಸಾಗರ ಗ್ರಾಮಾಂತರ ಠಾಣೆಯಲ್ಲಿ ಅನಿಲ್ ವಿರುದ್ಧ ಅತ್ಯಾಚಾರ ಕೇಸ್ ದಾಖಲಿಸಿದ್ದರು. ಸಾಗರ ಗ್ರಾಮಾಂತರ ವೃತ್ತದ ಸಿಪಿಐ ಆಗಿದ್ದ ಇ.ಒ.ಮಂಜುನಾಥ ಅವರು ಪ್ರಕರಣದ ತನಿಖೆ ನಡೆಸಿ, 2018ರ ಫೆ.1ರಂದು ಅನಿಲ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಇದನ್ನೂ ಓದಿ: ಫಸ್ಟ್ ಡೋಸ್ನಲ್ಲಿ ದೇಶದಲ್ಲೇ ಕರ್ನಾಟಕ ಫಸ್ಟ್; ಮೊದಲ ಡೋಸ್ ಲಸಿಕೀಕರಣ ಪರ್ಸೆಂಟೇಜ್ ಇಲ್ಲಿದೆ ನೋಡಿ…
ಪ್ರಕರಣದ ಕುರಿತು ವಿಚಾರಣೆ ನಡೆಸಿದ ಸಾಗರದ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಹಾಂತಪ್ಪ ಅವರು ಅನಿಲ್ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 60 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ಕಟ್ಟದಿದ್ದರೆ 2 ವರ್ಷಗಳ ಸಾದಾ ಜೈಲು ಶಿಕ್ಷೆಗೆ ಆದೇಶಿಸಿದ್ದು, ದಂಡದ ಮೊತ್ತದಲ್ಲಿ ನೊಂದ ಮಹಿಳೆಗೆ 50 ಸಾವಿರ ರೂ. ಪರಿಹಾರ ಪಾವತಿಸುವಂತೆ ಸೂಚಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಅಣ್ಣಪ್ಪ ನಾಯ್ಕ್ ಅವರು ವಾದ ಮಂಡಿಸಿದ್ದರು.