ಬೆಂಗಳೂರು: ಗಣಿ ಮತ್ತು ಭೂ ವಿಜ್ಞಾನ ಸಚಿವರಾಗಿ ಮುರುಗೇಶ್ ನಿರಾಣಿ ಅಧಿಕಾರ ಸ್ವೀಕರಿಸಿದ ಒಂದು ತಿಂಗಳಲ್ಲೇ, ಸಾವಿರಾರು ಜನರಿಗೆ ಆಶ್ರಯ ಒದಗಿಸುವ ಗ್ರಾನೈಟ್ ಕಲ್ಲು ಗಣಿಗಾರಿಕೆಯ ಗುತ್ತಿಗೆಯನ್ನು ಹರಾಜುರಹಿತ ನೀಡಿ ಹೊಸ ಅಧ್ಯಯನಕ್ಕೆ ಮುನ್ನುಡಿ ಬರೆದಿದ್ದಾರೆ.
ತುಮಕೂರು ಜಿಲ್ಲೆ ಶಿರಾ ತಾಲೂಕಿನ ಮದ್ದಕ್ಕನಹಳ್ಳಿಯ ಕಲ್ಲು ಕುಟಿಗರ ಸಹಕಾರ ಸಂಘಕ್ಕೆ ಗ್ರಾನೈಟ್ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿದ್ದು, ಪರಿಣಾಮ 5 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಸಿಗಲಿದೆ. ಕಲ್ಲು ಕುಟಿಗರ ಸಹಕಾರ ಸಂಘಕ್ಕೆ ಸಾರ್ವಜನಿಕ ಹಿತದೃಷ್ಟಿಯಿಂದ (ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳು, 1994ರ ನಿಯಮ 56ರಡಿ ವಿಶೇಷ ಪ್ರಕರಣವೆಂದು ಪರಿಗಣಿಸಿ) ಹರಾಜು ರಹಿತ ಮಂಜೂರಾತಿಗೆ ಶುಕ್ರವಾರ ಸಂಪುಟ ಸಭೆ ಒಪ್ಪಿಗೆ ಸೂಚಿಸಿದ್ದು, ಆ ಮೂಲಕ ಹಲವು ವರ್ಷದಿಂದ ನನೆಗುದಿಗೆ ಬಿದ್ದಿದ್ದ ಕಾರ್ಯಕ್ಕೆ ಇದೀಗ ಚಾಲನೆ ಸಿಕ್ಕಿದೆ. ಇದನ್ನೂ ಓದಿರಿ ಅಗ್ನಿಕುಂಡದಲ್ಲಿ ಮೂಡಿ ಬಂದ ಗಣೇಶ! ಗಣಹೋಮದ ವೇಳೆ ನಡೆಯಿತು ವಿಸ್ಮಯ, ಫೋಟೋ ವೈರಲ್
ಮದ್ದಕ್ಕನಹಳ್ಳಿ ಕಲ್ಲು ಕುಟಿಗರ ಸಹಕಾರ ಸಂಘಕ್ಕೆ ಕಲ್ಲು ಗಣಿ ಗುತ್ತಿಗೆಯನ್ನು ಮಂಜೂರು ಮಾಡಬೇಕೆಂಬ ಪ್ರಸ್ತಾವನೆ ಹಲವು ವರ್ಷಗಳಿಂದ ಇಲಾಖೆಯ ಹಂತದಲ್ಲೇ ನೆನಗುದಿಗೆ ಬಿದ್ದಿತ್ತು. ಈ ಸಂಘಕ್ಕೆ 1995ರಿಂದ ಜಾರಿಗೆ ಬರುವಂತೆ 5 ವರ್ಷದ ಅವಧಿಗೆ ಗಣಿ ಗುತ್ತಿಗೆಯನ್ನ ಮಂಜೂರು ಮಾಡಿ, ಪುನಃ 20 ವರ್ಷದ ಅವಧಿಗೆ ನವೀಕರಿಸಲಾಗಿತ್ತು. ಇದಾದ ಬಳಿಕ ಸಂಘವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕಾರಣ ನಿಗದಿತ ಅವಧಿಯಲ್ಲಿ ನೋಂದಣಿ ಮಾಡಿಸಿಕೊಂಡಿರಲಿಲ್ಲ. ಈ ಕಾರಣಕ್ಕೆ ಉಪನೋಂದಣಾಧಿಕಾರಿಗಳು 2015ರ ಡಿಸೆಂಬರ್ 29ರಂದು ನೋಂದಣಿ ಮಾಡಲು ಅವಕಾಶ ಇಲ್ಲ ಎಂದಿದ್ದರು. ನೋಂದಣಿಗಾಗಿ ಸಂಘವು ಸರ್ಕಾರಕ್ಕೆ ಮನವಿ ಮಾಡಿತ್ತು. ಈ ಅರ್ಜಿಯು ಕಾನೂನು ಇಲಾಖೆ ಬಳಿಕ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ರವಾನೆಯಾಗಿತ್ತು.
ಹೀಗೆ ಹಗ್ಗಜಗ್ಗಾಟದಲ್ಲೇ ನಡೆಯುತ್ತಿದ್ದ ಪ್ರಕ್ರಿಯೆಗೆ ಇದೀಗ ತಾರ್ಕಿಕ ಅಂತ್ಯ ಹಾಡಲಾಗಿದ್ದು, ಅಂತಿಮವಾಗಿ ಮದ್ದಕ್ಕನಹಳ್ಳಿಯ ಕಲ್ಲು ಕುಟಿಗರ ಸಹಕಾರ ಸಂಘಕ್ಕೆ ಗಣಿ ಗುತ್ತಿಗೆಯನ್ನ ಮರು ಮಂಜೂರಾತಿ ಮಾಡಲು ತೀರ್ಮಾನಿಸಲಾಗಿದೆ.