ತುಮಕೂರು: ತುರುವೇಕೆರೆ ಜೆಡಿಎಸ್ ಶಾಸಕ ಎಂ.ಟಿ. ಕೃಷ್ಣಪ್ಪ ಅವರನ್ನು ಗುಬ್ಬಿ ತಾಲೂಕಿನ ಸಿಎಸ್ಪುರ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ಕೈ ನಾಯಕರ ನಿವಾಸದ ಮುಂದೆ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಈ ಪ್ರತಿಭಟನೆಗೆ ನಾನು ಹೋಗುವುದಿಲ್ಲ, ಯಡಿಯೂರಿನಲ್ಲಿ ಮದುವೆ ಇದೆ, ಅಲ್ಲಿಗೆ ಹೋಗುತ್ತೀನಿ ಎಂದು ತಿಳಿಸಿದ್ದ ಎಂ.ಟಿ.ಕೃಷ್ಣಪ್ಪ, ಏಕಾಏಕಿ ಕಾರನ್ನು ಪ್ರತಿಭಟನೆಯತ್ತ ತಿರುಗಿಸಿದ ಕಾರಣ ಅವರನ್ನು ಇದೀಗ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮದುವೆಗೆ ತೆರಳದೆ ಪ್ರತಿಭಟನೆಯತ್ತ ಕಾರು ತಿರುಗಿಸಿದ ಹಿನ್ನೆಲೆ ಶಾಸಕ ಎಂ.ಟಿ. ಕೃಷ್ಣಪ್ಪ ಅವರನ್ನು ವಶಕ್ಕೆ ಪಡೆದಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದು ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಕಾಮಗಾರಿ ವಿರೋಧಿಸಿ, ತುಮಕೂರಿನ ಹೆಗ್ಗೆರೆ ಬಳಿಯಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಅವರ ನಿವಾಸದ ಮುಂದೆ ಪ್ರತಿಭಟನೆಗೆ ಕರೆ ಕೊಡಲಾಗಿತ್ತು ಎನ್ನಲಾಗಿದೆ.
ಮಸಾಲೆ ಜಯರಾಮ್ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕ ಎಂ.ಟಿ ಕೃಷ್ಣಪ್ಪ, ಬಿ ಸುರೇಶ್ ಗೌಡ ಇತರರು ಪಾಲ್ಗೊಂಡಿದ್ದರು.