ಜಿಲ್ಲೆ

ಸ್ಪ್ಲೆಂಡರ್ ಬೈಕ್ ಕಳ್ಳ ಅರೆಸ್ಟ್

kumarvrl

ಬೆಂಗಳೂರು: ಪತ್ನಿಯನ್ನು ಭೇಟಿಯಾಗಿ ವಾಪಸ್ ತೆರಳುವಾಗ ಬೈಕ್ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ಕಳ್ಳನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿಯ ಗುಯ್ಯನಹಳ್ಳಿ ನಿವಾಸಿ ಶಶಿಕುಮಾರ್ ಅಲಿಯಾಸ್ ಗುಂಡ್ವ (30) ಬಂಧಿತ. ಆತನಿಂದ 7.20 ಲಕ್ಷ ರೂ. ಮೌಲ್ಯದ 18 ಸ್ಪ್ಲೆಂಡರ್ ಬೈಕ್ ಜಪ್ತಿ ಮಾಡಲಾಗಿದೆ. ಮೇ 15ರಂದು ಡಿಫೆನ್ಸ್ ಕಾಲನಿಯಲ್ಲಿ ದೇವರಾಜ್ ಎಂಬುವರ ಬೈಕ್ ಕದ್ದು ಹೋಗುವಾಗ ಆರೋಪಿ ಸೆರೆಸಿಕ್ಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವೃತ್ತಿಪರ ಬೈಕ್ ಕಳ್ಳ ಶಶಿಯನ್ನು ಇತ್ತೀಚೆಗೆ ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜಾಮೀನು ಪಡೆದು ಹೊರಬಂದ ಆರೋಪಿ ಮತ್ತೆ ತನ್ನ ಚಾಳಿ ಮುಂದುವರಿಸಿದ್ದ. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಬೇಡಿಕೆ ಇರುವ ಸ್ಪ್ಲೆಂಡರ್ ಬೈಕ್​ಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಈತ, ಮನೆ ಮತ್ತು ರ್ಪಾಂಗ್​ನಲ್ಲಿ ನಿಲ್ಲಿಸಿರುವ ಬೈಕ್​ಗಳನ್ನು ಹಗಲು ಹೊತ್ತಿನಲ್ಲೇ ಕಳವು ಮಾಡುತ್ತಿದ್ದ. ಪೀಣ್ಯ ಹತ್ತಿರದ ಗಾರ್ಮೆಂಟ್ಸ್​ನಲ್ಲಿ ಶಶಿಯ ಪತ್ನಿ ಕೆಲಸ ಮಾಡುತ್ತಿದ್ದು, ಮಂಜುನಾಥನಗರದಲ್ಲಿ ನೆಲೆಸಿದ್ದಾಳೆ. ಪತ್ನಿಯನ್ನು ನೋಡುವ ಸಲುವಾಗಿ ನಗರಕ್ಕೆ ಬಂದು, ವಾಪಸ್ ಹೋಗುವಾಗ ಬೈಕ್ ಕದಿಯುತ್ತಿದ್ದ. ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ 9 ಸ್ಪ್ಲೆಂಡರ್​ಗಳು ಕಳ್ಳತನವಾಗಿದ್ದವು.

ಸರಣಿ ಕೃತ್ಯದಿಂದ ಎಚ್ಚೆತ್ತ ಪೊಲೀಸರು, ಆರೋಪಿ ಪತ್ತೆಗೆ ಬಲೆಬೀಸಿದ್ದರು. ಸಿಸಿ ಕ್ಯಾಮರಾದಲ್ಲಿ ಆರೋಪಿ ಚಹರೆ ಸೆರೆಯಾಗಿತ್ತು. ಈ ಸುಳಿವು ಆಧರಿಸಿ ಬಂಧನಕ್ಕೆ ಬಲೆಬೀಸಿದಾಗ ಮೇ 15ರಂದು ಡಿಫೆನ್ಸ್ ಕಾಲನಿ ಸಮೀಪ ಆರೋಪಿ ಸೆರೆಯಾಗಿದ್ದಾನೆ. ಬಾಗಲಗುಂಟೆಯ 9, ಮಾದನಾಯಕನಹಳ್ಳಿ-3, ಆರ್​ಎಂಸಿ ಯಾರ್ಡ್​ನ 1 ಸೇರಿ 13 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ದೊಡ್ಡಪ್ಪನದ್ದೇ ಸಾಥ್!: ಆರೋಪಿಯ ದೊಡ್ಡಪ್ಪ ನರಸಿಂಹಮೂರ್ತಿ ದುಬಾರಿ ಬಡ್ಡಿ ದಂಧೆಕೋರ. ಶಶಿ ಜತೆಗೆ ಸೇರಿ ಕದ್ದ ಬೈಕ್ ವಿಲೇವಾರಿ ಮಾಡುತ್ತಿದ್ದ. ಗ್ರಾಮೀಣ ಪ್ರದೇಶದಲ್ಲಿ ಭಾರಿ ಬೇಡಿಕೆ ಇರುವ ಸ್ಪ್ಲೆಂಡರ್ ಬೈಕ್​ಗಳನ್ನು ಕದ್ದು ದೊಡ್ಡಪ್ಪನಿಗೆ 3ರಿಂದ 4 ಸಾವಿರ ರೂ.ಗೆ ಶಶಿ ಮಾರುತ್ತಿದ್ದ. ಆ ಬೈಕ್​ಗಳನ್ನು ನರಸಿಂಹಮೂರ್ತಿ, ತನ್ನ ಸಾಲಗಾರರಿಂದ ಜಪ್ತಿಯಾದ ವಾಹನಗಳು ಎಂದು ಸುಳ್ಳು ಹೇಳಿ ರೈತರಿಗೆ 10ರಿಂದ 15 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದ. ನರಸಿಂಹಮೂರ್ತಿ ಸದ್ಯ ತಲೆಮರೆಸಿಕೊಂಡಿದ್ದು, ಪೊಲೀಸರು ಈತನ ಬಂಧನಕ್ಕೆ ಬಲೆಬೀಸಿದ್ದಾರೆ.