More

    ಲಗ್ನ ನೆಚ್ಚಿಕೊಂಡವರ ಬದುಕಿಗೆ ವಿಘ್ನ: ಬಾಣಸಿಗರು, ಡೆಕೋರೇಟರ್ಸ್, ಜವಳಿ ವ್ಯಾಪಾರಿಗಳು ಕಕ್ಕಾಬಿಕ್ಕಿ

    ಬೆಂಗಳೂರು: ಕರೊನಾ ಹಾವಳಿಯಿಂದಾಗಿ ಕಳೆದ ಮೂರು ತಿಂಗಳಿಂದ ಮದುವೆಗಳು ಮನೆಮಟ್ಟಿಗೆ ಸೀಮಿತಗೊಂಡು, ಕಲ್ಯಾಣಮಂಟಪಗಳಲ್ಲಿ ಮಂಗಳವಾದ್ಯ ಮೊಳಗುತ್ತಿಲ್ಲ. ಇದರಿಂದಾಗಿ ವಿವಾಹಗಳನ್ನೇ ನೆಚ್ಚಿಕೊಂಡಿರುವ ಹತ್ತಕ್ಕೂ ಹೆಚ್ಚು ಉದ್ಯಮಗಳು ಸಂಪೂರ್ಣ ನೆಲಕಚ್ಚಿದ್ದು, ಸಾವಿರಾರು ಕುಟುಂಬಗಳು ಬೀದಿಗೆ ಬೀಳುವ ಆತಂಕ ಶುರುವಾಗಿದೆ.

    ಅದ್ದೂರಿ ವಿವಾಹ ತಪ್ಪಿ ವಧು-ವರರ ಕುಟುಂಬಗಳಿಗೆ ಲಕ್ಷಾಂತರ ರೂಪಾಯಿ ಉಳಿತಾಯವಾಗುತ್ತಿದೆ ಎಂಬ ವಾದವೂ ಇದೆ. ಆದರೆ, ಉಳ್ಳವರು ಮದುವೆ ನೆಪದಲ್ಲಾದರೂ ಖರ್ಚು ಮಾಡುವುದರಿಂದ ಕೂಡಿಟ್ಟ ಹಣ ಚಾಲ್ತಿಗೆ ಬಂದು ಆರ್ಥಿಕತೆಗೆ ಇಂಬು ನೀಡುತ್ತದೆ ಎನ್ನುವುದೂ ನಿಜ. ಮಾ.23ರ ಬಳಿಕ ದೊಡ್ಡಮಟ್ಟದಲ್ಲಿ ಮದುವೆ ನಡೆದೇ ಇಲ್ಲ. ಕರೊನಾ ನಿರ್ವಹಣಾ ನಿಯಮಾವಳಿ ಪ್ರಕಾರ ಅತಿ ಕಡಿಮೆ ಜನರ ಸಮ್ಮುಖದಲ್ಲಿ ಒಂದಷ್ಟು ವಿವಾಹ ನಡೆದರೆ ಉಳಿದೆಲ್ಲವೂ ಮುಂದೂಡಲ್ಪಟ್ಟವು.

    ಮೇ 31ಕ್ಕೆ ಲಾಕ್​ಡೌನ್ ಪೂರ್ಣಪ್ರಮಾಣದಲ್ಲಿ ಸಡಿಲಿಕೆಯಾಗಿ ಮುಂಚಿನಂತೆಯೇ ವಿವಾಹ ನಡೆಯುತ್ತವೆಯೇ ಎಂಬ ಬಗ್ಗೆ ಸರ್ಕಾರದಲ್ಲೂ ಸ್ಪಷ್ಟತೆ ಇಲ್ಲ. ಇಡೀ ರಾಜ್ಯ ಸಂಪೂರ್ಣ ಕರೊನಾಮುಕ್ತವಾಗಿ ಹಸಿರು ವಲಯವಾಗಿ ಕಾಣಿಸಿಕೊಳ್ಳುವವರೆಗಂತೂ ಮುನ್ನೆಚ್ಚರಿಕಾ ಕ್ರಮ ಜಾರಿಯಲ್ಲಿಡುವುದು ಅನಿವಾರ್ಯ. ಹೀಗಾಗಿ ಒಂದು ವೇಳೆ ಮದುವೆ ಸಮಾರಂಭಗಳು ನಡೆದರೂ ಇತಿಮಿತಿಯಲ್ಲೇ ನಡೆಯುವುದು ನಿಶ್ಚಿತ.

    ಮದುವೆ ಅಡುಗೆ ಎಂದರೆ ಸರಿ ಸುಮಾರು 150-200 ಮಂದಿಗೆ ಕೆಲಸ ನೀಡುತ್ತದೆ. ಪ್ರಧಾನ ಬಾಣಸಿಗರು, ಉಸ್ತುವಾರಿಗಳು, ಸಹಾಯಕರು, ಬಡಿಸುವವರು, ಇವರೊಂದಿಗೆ ಸ್ವಚ್ಛತಾ ಕಾರ್ಯ ಮಾಡುವವರಿಗೂ ಕೆಲಸ ಸಿಗುತ್ತದೆ. ಆದರೆ ಇವರೆಲ್ಲ 2 ತಿಂಗಳಿಂದ ಕೆಲಸವೂ ಇಲ್ಲದೆ, ಪಗಾರವೂ ಸಿಗದೆ ದಿಕ್ಕುತೋಚದಂತಾಗಿದ್ದಾರೆ. ಸಮಾರಂಭ ಕಳೆಗಟ್ಟಿಸುವ ಡೆಕೋರೇಟರ್​ಗಳದ್ದು ಮತ್ತೊಂದು ಗೋಳು. ಅವರನ್ನೇ ಬಹುವಾಗಿ ನಂಬಿಕೊಂಡ ಪುಷ್ಪೋದ್ಯಮವೂ ಈಗ ಕಕ್ಕಾಬಿಕ್ಕಿಯಾಗಿದೆ. ಸಾಂಪ್ರದಾಯಿಕ ಸೀರೆ ತಯಾರಿಕೆ ಮತ್ತು ಮಾರಾಟಗಾರರು ವ್ಯಾಪಾರ ವಹಿವಾಟಿಲ್ಲದೆ ನಷ್ಟದ ಹಾದಿಯಲ್ಲಿದ್ದಾರೆ. ಅಲ್ಲೊಂದು ಇಲ್ಲೊಂದು ಮದುವೆ ನಡೆದರೂ ಖರೀದಿ ಪ್ರಮಾಣ ಇಲ್ಲವೇ ಇಲ್ಲ.

    ಇತ್ತೀಚಿನ ದಿನಗಳಲ್ಲಿ ವಿವಾಹಪೂರ್ವ ಫೋಟೋಶೂಟ್ ಕೂಡ ಟ್ರೆಂಡ್ ಆಗಿತ್ತು. ಆದರೀಗ ಅವರೆಲ್ಲ ಕೂಳಿಗಾಗಿ ಬೇರೆ ವೃತ್ತಿ ಹುಡುಕಿಕೊಳ್ಳಬೇಕಾಗಿದೆ. ದೊಡ್ಡ ಮೊತ್ತವಲ್ಲದಿದ್ದರೂ ಮಹಿಳೆಯರಿಗೆ ಉದ್ಯೋಗಾವಕಾಶ ಸೃಷ್ಟಿಸಿದ್ದ ಮೆಹೆಂದಿ, ಬ್ಯೂಟಿಷಿಯನ್ ವೃತ್ತಿಗೂ ಶೂನ್ಯ ಆವರಿಸಿದೆ. ನಾದಸ್ವರ ತಂಡಗಳಿಗೆ ಆರ್ಡರ್ ಇಲ್ಲ, ಅಕ್ಕಸಾಲಿಗರು ಮತ್ತು ಆಭರಣ ಮಾರಾಟಗಾರರಿಗೆ ಕರೊನಾ ಬಿಸಿ ಬಲವಾಗಿಯೇ ತಟ್ಟಿದೆ.

    ಫ್ಲವರ್ ಡೆಕೋರೇಷನ್ ಕ್ಷೇತ್ರ ಬೆಚ್ಚಿಬಿದ್ದಿದೆ. ರಾಜ್ಯದಲ್ಲಿ ಸಾವಿರಾರು ಮಂದಿ ಇದೇ ವೃತ್ತಿ ನಂಬಿಕೊಂಡಿದ್ದಾರೆ, ಬಂಡವಾಳ ಹೂಡಿದ್ದಾರೆ. ಮದುವೆಗಳು ನಡೆದರಷ್ಟೇ ಈ ಕ್ಷೇತ್ರ ಉಳಿಯಬಹುದು.

    | ಮಾಲತೇಶ, ಅಲಂಕಾರ ಉದ್ಯಮ

    ಮದುವೆಗಳೆಲ್ಲ ಮುಂದೂಡಲ್ಪಟ್ಟಿವೆ. ಮುಂದೆ ಹೇಗೋ ಗೊತ್ತಾಗುತ್ತಿಲ್ಲ. ಅಡುಗೆ ವೃತ್ತಿಯನ್ನೇ ನಂಬಿಕೊಂಡವರಿಗೆ ಬಹಳ ಕಷ್ಟ. ಬಾಣಸಿಗರ ತಂಡದಲ್ಲಿನ ನೂರಾರು ಮಂದಿ ಕೆಲಸವಿಲ್ಲದೆ ಮನೆಯಲ್ಲಿ ಕೂರುವಂತಾಗಿದೆ.
    | ಸುಧೀಂದ್ರ ಅಡುಗೆ ಗುತ್ತಿಗೆದಾರರು

    ಆಘಾತಕ್ಕೊಳಗಾದ ಉದ್ಯಮ

    ಜವಳಿ ವ್ಯಾಪಾರ, ಆಹ್ವಾನ ಪತ್ರಿಕೆ ಉದ್ಯಮ, ಡೆಕೋರೇಟರ್ಸ್, ಅಲಂಕಾರಿಕ ಪುಷ್ಪ ಬೆಳೆಗಾರರು, ಲೈಟಿಂಗ್-ಶಾಮಿಯಾನ, ಅಡುಗೆ ಕ್ಷೇತ್ರದವರು, ಬ್ಯೂಟಿಷಿಯನ್-ಮೆಹೆಂದಿ ಹಾಕುವವರು, ಬಾಸಿಂಗ ಸಿದ್ಧಪಡಿಸುವವರು, ಫೋಟೋಗ್ರಾಫರ್ಸ್- ವಿಡಿಯೋಗ್ರಾಫರ್ಸ್ ಹೀಗೆ ಮದುವೆಗಳನ್ನೇ ಹೆಚ್ಚು ನಂಬಿಕೊಂಡವರ ಪಟ್ಟಿ ದೊಡ್ಡದಿದೆ. ಕಲ್ಯಾಣಮಂಟಪ ನಡೆಸುವವರು, ಚಿನ್ನ-ಬೆಳ್ಳಿ ವ್ಯಾಪಾರಸ್ಥರು, ವಾಲಗ, ಚಪ್ಪರ ಹಾಕುವವರು.. ಹೀಗೆ ಸಾಕಷ್ಟು ಉಪ ವೃತ್ತಿಗಾರರೂ ಈಗ ಆತಂಕಿತರಾಗಿದ್ದಾರೆ.

    ಅರ್ಚಕರಿಗೆ ನೆರವು ನೀಡುವುದಕ್ಕಾಗಿ ಹುಂಡಿ ಹಣ ಬಳಸಬಹುದೇ?: ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts