ಬೆಂಕಿ ಅನಾಹುತಕ್ಕೆ ಬಲಿಯಾದ ತಾಯಿ ಲಕ್ಷ್ಮೀದೇವಿ, ಮಗಳು ಭಾಗ್ಯರೇಖಾ. 
ಜಿಲ್ಲೆ

ಅದೂ ಬ್ಲಾಸ್ಟ್ ಆಗಿದ್ದಿದ್ದರೆ ಮತ್ತಷ್ಟು ಭೀಕರವಾಗಿರುತ್ತಿತ್ತು; ಅಪಾರ್ಟ್​ಮೆಂಟ್​ ಅಗ್ನಿ ದುರಂತದ ಕುರಿತು ಇನ್ನಷ್ಟು ಮಾಹಿತಿ..

Webdesk - Ravikanth

ಬೆಂಗಳೂರು: ರಾಜಧಾನಿಯ ಆಶ್ರಿತ್ ಆ್ಯಸ್ಪೈರ್ ಅಪಾರ್ಟ್​ಮೆಂಟ್​ನಲ್ಲಿ ನಿನ್ನೆ ನಡೆದಿದ್ದ ಅಗ್ನಿ ಅನಾಹುತಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಹೊರಬಿದ್ದಿದ್ದು, ಪ್ರಕರಣಕ್ಕೆ ಕಾರಣವೇನು ಎಂಬುದನ್ನು ಇನ್ನೂ ಖಚಿತವಾಗಿ ಹೇಳಲು ಸಾಧ್ಯವಾಗಿಲ್ಲ. ಅದಾಗ್ಯೂ ಈ ಅಗ್ನಿ ಅನಾಹುತ ಮತ್ತಷ್ಟು ಭೀಕರವಾಗುವುದು ತಪ್ಪಿಹೋಗಿದೆ ಎಂಬ ಅಂಶವೊಂದು ಕೂಡ ಕಂಡುಬಂದಿದೆ.

ಅಗ್ನಿ ಅನಾಹುತ ಸಂಭವಿಸಿದ್ದ ಫ್ಲ್ಯಾಟ್​ಗೆ ಬಂದಿದ್ದ ಎಫ್​ಎಸ್​ಎಲ್ ಹಾಗೂ ಇತರ​ ಅಧಿಕಾರಿಗಳು ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿದ್ದು, ಅಗ್ನಿ ಅನಾಹುತಕ್ಕೆ ಕಾರಣ ಏನಿರಬಹುದು ಎಂಬ ಬಗ್ಗೆ ಎಲ್ಲ ಆಯಾಮಗಳಿಂದಲೂ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದಲ್ಲಿ ಮನೆಯಲ್ಲಿ ಬಹುತೇಕ ಎಲ್ಲ ವಸ್ತುಗಳು ಸುಟ್ಟುಹೋಗಿದ್ದು, ಅವುಗಳ ನಡುವೆಯೇ ತನಿಖೆಗೆ ಪೂರಕವಾಗಿರುವಂಥ ಮಾಹಿತಿಗಳನ್ನು ಕಲೆ ಹಾಕಲಾಗಿದೆ.

ತುಂಬಾ ದಿನಗಳಿಂದ ಬಳಸಿರದ ಫ್ಲ್ಯಾಟ್​​ ಸ್ವಚ್ಛಗೊಳಿಸಿ ದೇವರ ಕೋಣೆ ಬಳಿ ದೀಪ ಹಚ್ಚಿದ್ದ ತಾಯಿ ಲಕ್ಷ್ಮೀದೇವಿ, ಮಗಳು ಭಾಗ್ಯರೇಖಾ ನಂತರ ಅತ್ತ ಗಮನ ಹರಿಸದೆ ಇತರ ಕೆಲಸದಲ್ಲಿ ತೊಡಗಿಕೊಂಡಿದ್ದರು. ಈ ಸಂದರ್ಭದಲ್ಲಿ ಅಲ್ಲಿದ್ದ ವುಡನ್ ಮಂಟಪಕ್ಕೆ ಬೆಂಕಿ ತಗುಲಿ ಅನಾಹುತ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ ಶಾರ್ಟ್​ ಸರ್ಕ್ಯೂಟ್ ಕೂಡ ಕಾರಣವಾಗಿದ್ದಿರಬಹುದು ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.

ಇನ್ನೊಂದೆಡೆ ಮನೆಯಲ್ಲಿನ ಫ್ರಿಡ್ಜ್​ ಮೊದಲು ಸ್ಫೋಟಗೊಂಡಿರುವುದು ತಿಳಿದುಬಂದಿದ್ದು, ಅದರಿಂದಲೇ ಅವಘಡ ಸಂಭವಿಸಿರಬಹುದೇ ಎಂಬ ನಿಟ್ಟಿನಲ್ಲೂ ಪರಿಶೀಲನೆ ನಡೆಯುತ್ತಿದೆ. ಪ್ರಕರಣದ ತನಿಖೆಗೆ ಹಲವಾರು ಸಾಕ್ಷ್ಯಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಈ ನಡುವೆ ಮನೆಯಲ್ಲಿ ಎರಡು ಗ್ಯಾಸ್ ಸಿಲಿಂಡರ್ ಇರುವುದು ಬೆಳಕಿಗೆ ಬಂದಿದೆ. ಒಂದರಲ್ಲಿ ಬರೀ 4 ಕೆ.ಜಿ. ಗ್ಯಾಸ್ ಇದ್ದರೆ, ಇನ್ನೊಂದು ಸಿಲಿಂಡರ್ ಭರ್ತಿ ಇತ್ತು. ಒಂದುವೇಳೆ ಈ ಎರಡೂ ಸಿಲಿಂಡರ್​ ಬ್ಲಾಸ್ಟ್​​ ಆಗಿದ್ದಿದ್ದರೆ ಅಥವಾ ಇವುಗಳಲ್ಲಿದ್ದ ಗ್ಯಾಸ್ ಲೀಕ್ ಆಗಿದ್ದಿದ್ದರೆ ಈ ಅಗ್ನಿ ಅನಾಹುತದ ಪ್ರಕರಣ ಇನ್ನಷ್ಟು ಭೀಕರವಾಗಿರುತ್ತಿತ್ತು ಎಂಬುದು ಅಧಿಕಾರಿಗಳ ಗಮನಕ್ಕೆ ಬಂದಿದೆ.