ಜಿಲ್ಲೆ

ನಾನು ರಾಮಮಂದಿರಕ್ಕೆ ಈಗ ಹೋಗಲ್ಲ, ಪುರಸೊತ್ತು ಸಿಕ್ಕಾಗ ಹೋಗ್ತೇನೆ: ಸಿಎಂ ಸಿದ್ದರಾಮಯ್ಯ

Webdesk - Manjunatha B

ಶಿವಮೊಗ್ಗ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಉದ್ಘಾಟನೆ ಜನವರಿ 22, 2024ರಂದು ನೆರವೇರಲಿದ್ದು, ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯ ಜನವರಿ 22ರ ಬದಲುಪುರಸೊತ್ತು ಸಿಕ್ಕಾಗ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಈ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ರಾಮಮಂದಿರ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ನಾವು ರಾಮನನ್ನು ವಿರೋಧಿಸುತ್ತಿಲ್ಲ. ರಾಮಮಂದಿರ ವಿಚಾರದಲ್ಲಿ ಬಿಜೆಪಿಯ ರಾಜಕೀಯ ವಿರೋಧಿಸುತ್ತಿದ್ದೇವೆ.

ನಾನೂ ರಾಮಮಂದಿರಕ್ಕೆ ಹೋಗುತ್ತೇನೆ. ಆದ್ರೆ ಜನವರಿ 22ರಂದು ಅಯೋಧ್ಯೆಗೆ ಹೋಗಲ್ಲ, ಮುಂದೆ ಯಾವಾಗ್ಲಾದ್ರೂ ಪುರುಸೊತ್ತು ಸಿಕ್ದಾಗ ಯಾವ ರೀತಿ ನಿರ್ಮಿಸಿದ್ದಾರೆಂದು ನೋಡಿ ಬರುತ್ತೇನೆ. ಜನವರಿ 22ರಂದು ನಾವು ಶ್ರೀರಾಮನ ಪೂಜೆ ಮಾಡ್ತೇವೆ. ರಾಜ್ಯದಲ್ಲಿರುವ ರಾಮಮಂದಿರಗಳಿಗೆ ಹೋಗಿ ಪೂಜೆ ಮಾಡ್ತೇವೆ. ನಮ್ಮ ಕಾರ್ಯಕರ್ತರು ಶ್ರೀರಾಮನ ದೇಗುಲಗಳಲ್ಲಿ ಪೂಜೆ ಮಾಡ್ತಾರೆ ಎಂದು ತಿಳಿಸಿದ್ದಾರೆ.

ಜನವರಿ 22ರಂದು ಅಯೋಧ್ಯೆಯಲ್ಲಿ ರಾಮನ ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ. ಈ ಕಾರ್ಯಕ್ರಮಕ್ಕೆ ಮಲ್ಲಿಕಾರ್ಜುನ್​ ಖರ್ಗೆ, ಸೋನಿಯಾ ಗಾಂಧಿ ಮತ್ತು ಅಧೀರ್​ ಚೌಧರಿ ಅವರಿಗೆ ಆಹ್ವಾನ ಬಂದಿತ್ತು. ಆದರೆ ಕಾಂಗ್ರೆಸ್​​ ಈ ಕಾರ್ಯಕ್ರಮದಲ್ಲಿ ಭಾಗಿಯಾಗದಿರಲು ನಿರ್ಧರಿಸಿದೆ. ಹೈಕಮಾಂಡ್​ನ ಈ ನಿರ್ಧಾರವನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ.

ಜಾತಿ, ಧರ್ಮ, ಪಕ್ಷ-ಪಂಥವನ್ನು ಮೀರಿ ಸರ್ವರನ್ನೂ ಒಳಗೊಂಡು ಭಕ್ತಿ ಮತ್ತು ಗೌರವದಿಂದ ನಡೆಸಬೇಕಾದ ಒಂದು ಧಾರ್ಮಿಕ ಕಾರ್ಯಕ್ರಮವನ್ನು ಒಂದು ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಘ ಪರಿವಾರದ ನಾಯಕರು ಶ್ರೀರಾಮನಿಗೆ ಹಾಗೂ ದೇಶದ 140 ಕೋಟಿ ಜನತೆಗೆ ಅಗೌರವವನ್ನುಂಟು ಮಾಡಿದ್ದಾರೆ.

ಶ್ರದ್ದಾಪೂರ್ವಕವಾಗಿ ನಡೆಸಬೇಕಾಗಿದ್ದ ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯ ಪ್ರಚಾರದ ಅಭಿಯಾನವನ್ನಾಗಿ ಮಾಡಿದ್ದು ಸಮಸ್ತ ಹಿಂದೂ ಬಾಂಧವರಿಗೆ ಮಾಡಿರುವ ದ್ರೋಹವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ಹಾಗೂ ಆರ್​ಎಸ್​ಎಸ್​ ವಿರುದ್ಧ ಗುಡುಗಿದ್ದಾರೆ.