ಚಿಕ್ಕಬಳ್ಳಾಪುರ: ಮುಂದಿನ ಕೆಲ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಈಗಾಗಲೇ ರಾಜಕೀಯ ಪಕ್ಷಗಳು ಭರದಿಂದ ಸಿದ್ಧತೆ ಆರಂಭಿಸಿದ್ದು, ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಸಿವೆ. ಕಾಂಗ್ರೆಸ್ ಪಕ್ಷ ಕೂಡ ಅಭ್ಯರ್ಥಿಗಳ ಆಯ್ಕೆ ನಡೆಸುತ್ತಿದ್ದು, ಇದರ ನಡುವೆಯೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆಯಾಗಿದೆ.
ಕಳೆದ ಕೆಲ ದಿನಗಳಿಂದ ಮಾಧ್ಯಮದವರಿಂದ ಅಂತರ ಕಾಯ್ದುಕೊಂಡಿದ್ದ ಶಾಸಕ ಪ್ರದೀಪ್ ಈಶ್ವರ್ ಇಂದು ಪ್ತತ್ಯಕ್ಷವಾಗಿದ್ದು, ಶ್ರೀರಾಮಚಂದ್ರ ಬಿಜೆಪಿಯವರ ಅಪ್ಪನ ಮನೆ ಆಸ್ತಿ ಏನೂ ಅಲ್ಲ. ನಾವೂ ಹಿಂದುಗಳೇ, ನಮಗೂ ಶ್ರೀ ರಾಮಚಂದ್ರ ಆರಾಧ್ಯ ದೇವರೇ. ನಮ್ಮಲ್ಲೂ ಶ್ರೀರಾಮನ ಭಕ್ತರಿದ್ದಾರೆ ಎಂದು ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಶಾಸಕ ಪದೀಪ್ ಈಶ್ವರ್, ಶ್ರೀರಾಮ ಹಿಂದೂಗಳ ಆರಾಧ್ಯ ದೈವ. ನಾನೂ ಕೂಡ ಶ್ರೀರಾಮನ ಭಕ್ತ. ಶ್ರೀರಾಮನನ್ನು ಆರಾಧಿಸುತ್ತೇವೆ. ಅಲ್ಲಾ, ಏಸುವನ್ನು ಗೌರಿವಿಸುತ್ತೇವೆ. ಬಿಜೆಪಿಯವರ ತರಹ ಧರ್ಮ-ಧರ್ಮಗಳ ಮಧ್ಯೆ ಕಿತ್ತಾಟ ತರುವ ಕೆಲಸ ಮಾಡುವುದಿಲ್ಲ. ಎಲ್ಲಾ ಧರ್ಮಗಳನ್ನು ಕಾಂಗ್ರೆಸ್ ಸಮಾನವಾಗಿ ಕಾಣುತ್ತದೆ. ಶ್ರಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರು ಗೈರಾಗುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ವಿರೋಧ; ಶೃಂಗೇರಿ ಶಾರದಾ ಪೀಠ ಕೊಟ್ಟ ಸ್ಪಷ್ಟನೆ ಹೀಗಿದೆ
ಪ್ರತಾಪ್ ಸಿಂಹ ಒಬ್ಬ ಮುಠ್ಠಾಳ, ಅಯೋಗ್ಯ, 40-50 ವರ್ಷ ಅನುಭವ ಇರುವ ಸಿದ್ದರಾಮಯ್ಯ ಬಗ್ಗೆ ಬಾಯಿಗೆ ಬಂದಹಾಗೆ ಮಾತನಾಡುತ್ತಾನೆ. ಪ್ರತಾಪ್ ಸಿಂಹ ಸಿದ್ದರಾಮಯ್ಯ ಬಗ್ಗೆ ನಾಲಿಗೆ ಬಿಗಿಹಿಡಿದು ಮಾತಾಡಬೇಕು. ಪ್ರತಾಪ್ ಸಿಂಹ ಅವರೇ ಬಾಯಿ ಮುಚ್ಚುಕೊಂಡು ಇರಬೇಕು. ಬಾಯಿ ತೆವಲು ಕಡಿಮೆ ಮಾಡಿಕೊಳ್ಳಬೇಕು. ಲೋಕಸಭೆಗೆ ಪಾಸ್ ಕೊಟ್ಟ ನೀವು ದೇಶದ್ರೋಹಿಗಳಲ್ವಾ. ಉತ್ತರ ಕೊಡಿ. ಒಂದು ವೇಳೆ ನಾವ್ ಪಾಸ್ ಕೊಟ್ಟಿದ್ದರೆ ಏನು ಪಟ್ಟ ಕಟ್ಟುತಿದ್ರಿ, ಪ್ರತಾಪ್ ಸಿಂಹ ಒಂದು ಕಲ್ಲು ಹಾಕಿದರೆ, ನಾವು ನಾಲ್ಕು ಕಲ್ಲು ಹಾಕುತ್ತೇವೆ. ಲೋಕಸಭೆ ಪ್ರವೇಶಕ್ಕೆ ಪಾಸ್ ಕೊಟ್ಟ ಪ್ರತಾಪ್ ಸಿಂಹ ದೇಶದ್ರೋಹಿ ಅಲ್ವಾ ಎಂದು ಪ್ರಶ್ನಿಸಿದ್ಧಾರೆ.
ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರವನ್ನು ವಾಪಸ್ ತಂದೆಗೆ ಬಿಟ್ಟುಕೊಟ್ಟಿರುವ ಯತೀಂದ್ರ ಸಿದ್ದರಾಮಯ್ಯನವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಬಹಿರಂಗಪಡಿಸಿದ್ದಾರೆ.
ಇದರೊಂದಿಗೆ ಈ ಬಾರಿ ಸಿಎಂ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಮೈಸೂರು ಲೋಕಸಭೆಗೆ ಸ್ಪರ್ಧಿಸುತ್ತಾರೆ ಎನ್ನುವ ಸುದ್ದಿಗೆ ಈಗ ರೆಕ್ಕೆಪುಕ್ಕ ಬಂದಂತಾಗಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.