

ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೆಲವು ವಿಚಾರಗಳು ಆಗಿಂದಾಗೆ ನೆಟ್ಟಿಗರ ಗಮನ ಸೆಳೆಯುತ್ತಿರುತ್ತವೆ. ಇದೀಗ ವಿಚಿತ್ರ ಘಟನೆಯೊಂದು ತೆಲಂಗಾಣದ ವೇಮುಲವಾಡದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಸ್‌ಗಳು ಬಂದು ಹೋಗುವ ಆ ಬ್ಯುಸಿ ಡಿಪೋದಲ್ಲಿ ಕೋಳಿ ಕೂಡ ಆಶ್ರಯ ಪಡೆಯುತ್ತಿದೆ. ದೂರದ ಸ್ಥಳಗಳಿಗೆ ಪ್ರಯಾಣಿಕರನ್ನು ಕರೆದುಕೊಂಡು ಹೋಗಿ ವಾಪಸ್ ಡಿಪೋಗೆ ಬರುವ ಬಸ್ ಗಳು ಅಲ್ಲಿಯೇ ನಿಲ್ಲುವುದು ಸಾಮಾನ್ಯವಾಗಿದೆ. ಆದರೆ ಇಲ್ಲಿ ಕೋಳಿಯೂ ಜೀವಿಸುತ್ತಿರುವ ವಿಚಾರ ಕೇಳಿ ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಸಿರುವ ವೇಮುಲವಾಡ ಡಿಪೋದ ಹಿರಿಯ ಅಧಿಕಾರಿಯೊಬ್ಬರು, ಕರೀಂನಗರದಿಂದ ವೇಮುಲಾವಾಡಕ್ಕೆ ಬರುವಾಗ ಪ್ರಯಾಣಿಕರೊಬ್ಬರು ಯಾರಿಗೆ ತಿಳಿಯದಂತೆ ಕೋಳಿ ಒಂದನ್ನು ಪ್ಯಾಕ್ ಮಾಡಿ ಬ್ಯಾಗ್ ಒಂದರಲ್ಲಿ ಇರಿಸಿದ್ದಾರೆ. ಇಳಿಯುವಾಗ ಕೋಳಿ ಇದ್ದ ಬ್ಯಾಗ್ಅನ್ನು ಪ್ರಯಾಣಿಕ ಮರೆತ್ತಿದ್ದು, ಇದನ್ನು ಗಮನಿಸಿದ ನಿರ್ವಾಹಕ ಡಿಪೋದಲ್ಲಿ ಒಪ್ಪಿಸಿ ಮನೆಗೆ ತೆರಳಿದ್ದಾನೆ.
ಕಳೆದ ಕೆಲವು ದಿನಗಳಿಂದ ಕೋಳಿ ನಮ್ಮ ಸುಪರ್ದಿಯಲ್ಲಿದ್ದು, ಅದಕ್ಕೆ ಆಹಾರವನ್ನು ನಾವೇ ಒದಗಿಸುತ್ತಿದ್ದೇವೆ. ಈ ಬಗ್ಗೆ ಪ್ರಕಟಣೆ ಹೊರಡಿಸಲಾಗಿದ್ದು, ಮಾಲೀಕರಾಗಲಿ ಯಾರು ಸಹ ಅದನ್ನು ಪಡೆಯಲು ಮುಂದೆ ಬಂದಿಲ್ಲ. ನಾವೇ ಅಧಿಕಾರಿಗಳೇ ಅದನ್ನು ನಿರ್ವಹಣೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇತ್ತ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಹಲವರು ಅಧಿಕಾರಿಗಳ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಧಿಕಾರಿಗಳ ನಡೆಯನ್ನು ಶ್ಲಾಘಿಸಿದ್ದಾರೆ. ಕೋಳಿ ಸಿಕ್ಕರೆ ಮಸಾಲೆ ಅರೆಯುವ ಈ ಕಾಲದಲ್ಲಿ ಮಾಲೀಕರ ಆಗಮನಕ್ಕಾಗಿ ಅದನ್ನು ಸಾಕುತ್ತಿರುವ ನೀವೇ ಗ್ರೇಟ್ ಎಂದು ಹಲವರು ಅಧಿಕಾರಿಗಳ ನಡೆಯನ್ನು ಪ್ರಶಂಶಿಸಿದ್ದಾರೆ. ಕೆಲವರು ಕಣ್ಣ ಮುಂದೆ ಕೋಳಿ ಇದ್ದರೂ ತಿನ್ನಲಾರದ ಪರಿಸ್ಥಿತಿ ನೆನಸಿಕೊಂಡರೆ ಎಂದು ಹೇಳುತ್ತ ಅಪಹಾಸ್ಯ ಮಾಡಿದ್ದಾರೆ.