More

    ಕೋಚಿಮುಲ್​ ನೇಮಕಾತಿ ಹಗರಣದಲ್ಲಿ ಲಂಚ; ಕಾಂಗ್ರೆಸ್​ ಶಾಸಕ ನಂಜೇಗೌಡ ವಿರುದ್ಧ ED ಆರೋಪ

    ನವದೆಹಲಿ: ಕೋಚಿಮುಲ್​ ನೇಮಕಾತಿಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಮಾಲೂರು ಕಾಂಗ್ರೆಸ್​ ಶಾಸಕ ಕೆ.ವೈ. ನಂಜೇಗೌಡ ತಮ್ಮ ಅಧಿಕಾರವನ್ನು ಸಂಪೂರ್ಣವಾಗಿ ದುರುಪಯೋಗ ಪಡಿಸಿಕೊಂಡಿದ್ದು, ಕಿಕ್​ಬ್ಯಾಕ್​ ಪಡೆದಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.

    ಈ ಕುರಿತು ಪ್ರತಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಜಾರಿ ನಿರ್ದೇಶನಾಲಯ ಪ್ರಭಾವಿ ರಾಜಕಾರಣಿಗಳ ಶಿಫಾರಸ್ಸಿನ ಮೇರೆಗೆ 30 ಮಂದಿಯನ್ನು ಸಂದರ್ಶನ ಮಾಡದೆ ಕೋಚಿಮುಲ್​ನಲ್ಲಿ ನೇಮಿಸುವ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

    ಕೋಚಿಮುಲ್​ ನೇಮಕಾತಿ ಹಗರಣ ಹಾಗೂ ಅಕ್ರಮವಾಗಿ 150 ಕೋಟಿ ರೂ. ಮೌಲ್ಯದ ಭೂಮಿ ಮಂಜೂರಾತಿಗೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ವೈ. ನಂಜೇಗೌಡ (61) ಮತ್ತು ಆತನ ಜೊತೆ ನಿಕಟ ಸಂಪರ್ಕ ಹೊಂದಿದ್ದವರ ಮನೆ ಹಾಗೂ ಕಚೇರಿಗಳ ಮೇಲೆ ಜನವರಿ 08ರಂದು ಜಾರಿ ನಿರ್ದೇಶನಾಲಯ ದಾಳಿ ಮಾಡಿತ್ತು.

    ಶಾಸಕ ನಂಜೇಗೌಡ ಮತ್ತು ಇತರ ನಾಲ್ವರು ಸದಸ್ಯರ ಅಧ್ಯಕ್ಷತೆಯ ಕೋಚಿಮುಲ್‌ನ ನೇಮಕಾತಿ ಸಮಿತಿಯು ಸಂದರ್ಶನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಂಡಿರುವುದು ದಾಳಿ ವೇಳೆ ಜಾರಿ ನಿರ್ದೇಶನಾಲಯದ ಗಮನಕ್ಕೆ ಬಂದಿದ್ದು, ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳ ಹೆಸರನ್ನು ಬಹಿರಂಗಪಡಿಸದೆ ತರಬೇತಿಗೆ ಕಳುಹಿಸಲಾಗಿದೆ.

    ಇದನ್ನೂ ಓದಿ: ಅಧಿಕಾರಿಗಳಿಗೆ ತಲೆನೋವು ತಂದ ಕೋಳಿ; ಕಾರಣ ಕೇಳಿದರೆ ನಕ್ಕು ಸುಸ್ತಾಗುವುದು ಪಕ್ಕಾ

    ತಪಾಸಣೆ ವೇಳೆ ಕೋಚಿಮುಲ್​ನ ನಿರ್ದೇಶಕರು ಪ್ರತಿ ಸೀಟನ್ನು 20-30 ಲಕ್ಷ ರೂಪಾಯಿಗೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಕೆಲವು ಪ್ರಭಾವಿ ರಾಜಕಾರಣಿಗಳು ಇದರಲ್ಲಿ ತೊಡಗಿದ್ದು, ಅಧ್ಯಕ್ಷರಾಗಿರುವ ಶಾಸಕ ನಂಜೇಗೌಡ ಸೀಟುಗಳ ಮಾರಾಟದಲ್ಲಿ ನೇರವಾಗಿ ತೊಡಗಿಸಿಕೊಂಡಿದ್ದಾರೆ. ಅಕ್ರಮ ಸರ್ಕಾರಿ ಭೂ ಮಂಜೂರಾತಿ ಪ್ರಕರಣದಲ್ಲಿ 25 ಲಕ್ಷಕ್ಕೂ ಹೆಚ್ಚು ನಗದು, 50 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳು, ಡಿಜಿಟಲ್​ ಡೇಟಾವನ್ನು ವಶಪಡಿಸಿಕೊಳ್ಳಲಾಗಿದೆ.

    ಮಾಲೂರು ಭೂ ಮಂಜೂರಾತಿ ಸಮಿತಿ ಅಧ್ಯಕ್ಷರಾಗಿದ್ದ ನಂಜೇಗೌಡ ಅವರು ಸಮಿತಿಯ ಇತರ ಸದಸ್ಯರು ಹಾಗೂ ಕಂದಾಯ ಅಧಿಕಾರಿಗಳ ಜತೆ ಶಾಮೀಲಾಗಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಒಂದೇ ತಿಂಗಳಲ್ಲಿ 150 ಕೋಟಿ ರೂ. ಮೌಲ್ಯದ ಸುಮಾರು 80 ಎಕರೆ ಭೂಮಿಯನ್ನು ಕೆಲವು ಸಂಸ್ಥೆಗಳ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಮಂಜೂರು ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮತ್ತು ನಕಲಿ ದಾಖಲೆಗಳ ಮೂಲಕ ಅಕ್ರಮವಾಗಿ ಭೂಮಿ ಹಂಚಿಕೆ ಮಾಡಲಾಗಿದೆ. ಭೂ ಮಂಜೂರಾತಿ ಹಾಗೂ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸರು FIR ದಾಖಲಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts