ಬೆಂಗಳೂರು: ಶಾಶ್ವತವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಉಳಿಯುವುದು ಎಂದಿದ್ದ ಶಾಸಕ ಶರತ್ ಬಚ್ಚೇಗೌಡ ಕೊನೆಗೂ ಕಾಂಗ್ರೆಸ್ ಸೇರುವ ಕಾಲ ಸನಿಹದಲ್ಲಿದೆ.
ಎಂಟಿಬಿ ನಾಗರಾಜ್ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಕ್ಷೇತ್ರದ ಬೈ ಎಲೆಕ್ಷನ್ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲವು ಸಾಧಿಸಿದ್ದ ಶರತ್ ಬಚ್ಚೇಗೌಡ, ಇದೀಗ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ಗೆ ಸೇರಲು ಸಜ್ಜಾಗಿದ್ದಾರೆ. ಅದಕ್ಕಾಗಿ ಫೆ.25ರಂದು ಮುಹೂರ್ತ ಫಿಕ್ಸ್ ಮಾಡಲಾಗಿದ್ದು, ಅಂದು ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಸೇರಲಿದ್ದಾರೆ.
ಶರತ್ ಬಚ್ಚೇಗೌಡರನ್ನು ಕಾಂಗ್ರೆಸ್ಗೆ ಸೇರ್ಪಡೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾರನ್ನು ಒಪ್ಪಿಸುವಲ್ಲಿ ರಾಜ್ಯ ಕಾಂಗ್ರೆಸ್ ಘಟಕ ಯಶಸ್ವಿಯಾಗಿದೆ. ದೆಹಲಿಯ ಹಿರಿಯ ವಕೀಲರ ಬಳಿ ಚರ್ಚೆ ಮಾಡಿದ ಡಿ.ಕೆ. ಶಿವಕುಮಾರ್, ವಕೀಲರ ಸಲಹೆ ಮೇರೆಗೆ ಕಾಂಗ್ರೆಸ್ಗೆ ಸೇರಿಸಿಕೊಳ್ಳಲು ಫೈನಲಿ ಅಸ್ತು ಎಂದಿದ್ದಾರೆ. ಅದರಂತೆ ಫೆ.25ರಂದು ಸೇರ್ಪಡೆ ಕಾರ್ಯಕ್ರಮ ಆಗಲಿದ್ದು, ಕಾಂಗ್ರೆಸ್ನ ನಾಯಕರಾದ ದಿನೇಶ್ ಗುಂಡೂರಾವ್ ಮತ್ತು ಕೃಷ್ಣ ಬೈರೇಗೌಡ ಕೂಡ ಉಪಸ್ಥಿತರಿರಲಿದ್ದಾರೆ.