ಜಿಲ್ಲೆ

ಮೆನೇಜರ್‌ಗೆ ನಕಲಿ ಲೆಟರ್‌ಹೆಡ್ ಕಳುಹಿಸಿ ಬ್ಯಾಂಕ್‌ನಿಂದ ಹಣ ವರ್ಗಾಯಿಸಿ ಮೋಸ: 27,99,448 ರೂ. ಗೋತಾ

ಪಡುಬಿದ್ರಿ: ಇಲ್ಲಿನ ರಾಷ್ಟ್ರೀಕೃತ ಬ್ಯಾಂಕೊಂದರ ಪ್ರಭಾರ ಪ್ರಬಂಧಕಿ ಮೊಬೈಲ್‌ಗೆ ವರುಣ್ ಕರ್ಕೇರ ಎಂಬಾತ, ಸಂಸ್ಥೆಯೊಂದರ ನಕಲಿ ಲೆಟರ್‌ಹೆಡ್ ಬಳಸಿ ರಿಕ್ವೆಸ್ಟ್ ಲೆಟರ್ ಕಳುಹಿಸಿ 3 ಖಾತೆಗಳಿಗೆ ಒಟ್ಟು 27,99,448 ರೂಪಾಯಿ ಹಣ ವರ್ಗಾಯಿಸಿ ವಂಚಿಸಿದ ಪ್ರಕರಣ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ವರುಣ್ ಕರ್ಕೇರ ಹೆಸರಲ್ಲಿ ಕರೆ ಮಾಡಿ ಮೋಸ

ವರುಣ್ ಕರ್ಕೇರ ಶುಕ್ರವಾರ 3 ಗಂಟೆಗೆ ಮೊಬೈಲ್ ಪೋನ್‌ನಿಂದ ಪ್ರಬಂಧಕಿಗೆ ಕರೆ ಮಾಡಿ ತಾನು ಆಸ್ಪತ್ರೆಯಲ್ಲಿದ್ದು ತನಗೆ ಹಣದ ಅವಶ್ಯಕತೆ ಇದ್ದು ಚೆಕ್‌ಬುಕ್ ನೀಡುವಂತೆ ಕೇಳಿ, ನಂತರ 3.47ಕ್ಕೆ ಮತ್ತೆ ಕರೆ ಮಾಡಿ ರಿಕ್ವೆಸ್ಟ್ ಲೆಟರ್ ಇ-ಮೇಲ್ ಮುಖಾಂತರ ಕಳುಹಿಸಲು ಅಸಾಧ್ಯವಾಗಿದ್ದು, ವಾಟ್ಸ್‌ಅಪ್ ಮೂಲಕ ರಿಕ್ವೆಸ್ಟ್ ಲೆಟರ್ ಕಳುಹಿಸುವುದಾಗಿ ತಿಳಿಸಿದ್ದ. ಬಳಿಕ ವಾಟ್ಸ್‌ಆಪ್‌ಗೆ ರಿಕ್ವೆಸ್ಟ್ ಲೆಟರ್ ಕಳುಹಿಸಿದ್ದು, ಅದು ಜಿ.ಕೆ.ಪವರ್ ಘಾಟ್ಕೆ ಕರ್ಕೇರ ಪವರ್ ಇಂಡಸ್ಟ್ರಿಸ್ ಹೆಸರಿನ ಲೆಟರ್‌ಹೆಡ್ ಆಗಿದ್ದು, ಅದರಲ್ಲಿ ಸೀಲ್ ಹಾಗೂ ಸಹಿ ಇದ್ದು, ಅಕೌಂಟ್ ನಂಬ್ರ ನಮೂದಿಸಲಾಗಿತ್ತು.

ಅಸಲಿ ಸಿಬ್ಬಂದಿ ಕರೆ ಮಾಡಿದಾಗ ಮೋಸ ತಿಳಿಯಿತು

ಅಜಯ್ ಇರ್ಪಾಚೆ ಖಾತೆಗೆ 9,70,855 ರೂ, ಗುಡ್ಡು ಪಾಂಡೆ ಅಕೌಂಟ್‌ಗೆ 8,92,740 ರೂ, ಹರಪಾಲ್‌ಗೆ 9,35,853 ರೂ. ಅನ್ನು ಟ್ರಾನ್ಸ್‌ಫರ್ ಮಾಡುವಂತೆ ಸೂಚಿಸಿದ್ದರು. ಅದರಂತೆ ಅಜಯ್ ಇರ್ಪಾಚೆ ಮತ್ತು ಗುಡ್ಡು ಪಾಂಡೆ ಅಕೌಂಟಿಗೆ ಆರ್‌ಟಿಜಿಎಸ್ ಮುಖಾಂತರ, ಹರಪಾಲ್ ಅಕೌಂಟ್‌ಗೆ ನಾರ್ಮಲ್ ರೀತಿಯಲ್ಲಿ ಹಣ ವರ್ಗಾವಣೆ ಮಾಡಲಾಗಿತ್ತು. ನಂತರ ಸಂಜೆ 4.24ಕ್ಕೆ ಆಧಿಕೃತ ಸಂಸ್ಥೆ ಸಿಬ್ಬಂದಿ ಪ್ರಬಂಧಕಿಗೆ ಕರೆಮಾಡಿ ಅವರ ಫರ್ಮ್ ಅಕೌಂಟ್‌ನಿಂದ ಹಣ ವರ್ಗಾವಣೆಗೊಂಡ ಬಗ್ಗೆ ಕೇಳಿದ್ದು, ಆಗ ಪ್ರಬಂಧಕಿ ರಿಕ್ಷೆಸ್ಟ್ ಲೆಟರ್ ಬಗ್ಗೆ ತಿಳಿಸಿದಾಗ, ಆಗ ಯಾರೋ ಮೋಸಮಾಡಿ ರಿಕ್ವೆಸ್ಟ್ ಲೆಟರ್ ಕಳುಹಿಸಿರುವುದಾಗಿ ತಿಳಿದು ಬಂದಿದೆ. ತಕ್ಷಣ ಬ್ಯಾಂಕ್‌ನ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಪೊಲೀಸರಿಗೆ ದೂರು ನೀಡಿದ್ದಾರೆ.