More

    ಉಡುಪಿ ನಗರಸಭೆಯಿಂದ ಅಂಗಡಿ, ಹೋಟೆಲ್‌ಗಳ ಮೇಲೆ ದಾಳಿ: ಪ್ಲಾಸ್ಟಿಕ್ ಬಳಕೆಗೆ ದಂಡ

    ಪ್ರಶಾಂತ ಭಾಗ್ವತ, ಉಡುಪಿ
    ಪರಿಸರ ಸಂರಕ್ಷಣೆಯೊಂದಿಗೆ ಉಡುಪಿಯನ್ನು ಕಸಮುಕ್ತ ನಗರವನ್ನಾಗಿಸಲು ನಗರಸಭೆ ದಿಟ್ಟ ಕ್ರಮಕ್ಕೆ ಮುಂದಾಗಿದೆ. ಎಷ್ಟು ತಿಳಿಹೇಳಿದರೂ ಪ್ಲಾಸ್ಟಿಕ್ ಬಳಕೆ ನಿಲ್ಲಿಸದ ಅಂಗಡಿ ಹಾಗೂ ಹೋಟೆಲ್‌ಗಳ ಮೇಲೆ ದಾಳಿ ನಡೆಸಿ, ದಂಡ ಹಾಕತೊಡಗಿದ್ದಾರೆ.

    ನಿಷೇಧಿತ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳ ಬದಲಾಗಿ ಮರುಬಳಕೆ ಮಾಡಬಹುದಾದ ವಸ್ತು ಬಳಸುವಂತೆ ಅಂಗಡಿ ಹಾಗೂ ಹೋಟೆಲ್ ಮಾಲೀಕರಿಗೆ ಸೂಚನೆಯೊಂದಿಗೆ ಎಚ್ಚರಿಕೆಯನ್ನೂ ಕೊಡುತ್ತಿದ್ದಾರೆ.

    ಪೇಪರ್ ಪ್ಲೇಟ್ ಹಾಗೂ ಪೇಪರ್ ಗ್ಲಾಸ್ ಸಮಸ್ಯೆ

    ದಶಕದಿಂದ ಪ್ಲಾಸ್ಟಿಕ್ ವಸ್ತು ಬಳಕೆ ಮಾಡದಂತೆ ಜಾಗೃತಿ, ನಿಷೇಧದ ಕ್ರಮದಿಂದ ಸಾರ್ವಜನಿಕರಲ್ಲಿ ತಕ್ಕಮಟ್ಟಿಗೆ ಅರಿವು ಮೂಡಿದೆ. ಇದು ಸಂತಸ ಸಂಗತಿಯಾದರೂ ಈ ನಡುವೆ ಇನ್ನೊಂದು ಸಮಸ್ಯೆ ಉದ್ಭವಿಸಿದೆ. ಪೇಪರ್ ಪ್ಲೇಟ್ ಹಾಗೂ ಪೇಪರ್ ಗ್ಲಾಸ್ ಬಳಕೆ ಅತಿಯಾಗತೊಡಗಿದೆ. ರಸ್ತೆ ಬದಿಯ ಹೋಟೆಲ್, ಮನೆಗಳಲ್ಲಿ ನಡೆಯುವ ಶುಭ ಕಾರ್ಯಕ್ರಮ, ಸಂಘ-ಸಂಸ್ಥೆಗಳ ಕಾರ್ಯಕ್ರಮ, ಟೀ ಸ್ಟಾಲ್ ಹಾಗೂ ಪಾನಿಪುರಿ ಅಂಗಡಿಗಳಲ್ಲಿ ಇವುಗಳ ಬಳಕೆ ಮಿತಿಮೀರತೊಡಗಿದೆ. ಈ ವಸ್ತುಗಳೇ ಇದೀಗ ಪರಿಸರಕ್ಕೆ ಮಾರಕವಾಗುತ್ತಿದ್ದು, ಅವುಗಳ ವಿಲೇವಾರಿಯೂ ನಗರಸಭೆಗೆ ತಲೆನೋವಾಗಿ ಪರಿಣಮಿಸಿದೆ.

    ಉಡುಪಿ ನಗರಸಭೆಯಿಂದ ಅಂಗಡಿ, ಹೋಟೆಲ್‌ಗಳ ಮೇಲೆ ದಾಳಿ: ಪ್ಲಾಸ್ಟಿಕ್ ಬಳಕೆಗೆ ದಂಡ

    ಸ್ಟೀಲ್ ಲೋಟ, ತಟ್ಟೆ ಬಳಸಿ

    ಕರೊನಾ ಸಂದರ್ಭದಲ್ಲಿ ಪ್ಲಾಸ್ಟಿಕ್ ಹಾಗೂ ಪೇಪರ್ ಪ್ಲೇಟ್, ಪೇಪರ್ ಗ್ಲಾಸ್ ಬಳಕೆ ಹೆಚ್ಚು ರೂಢಿಯಾಗುವಂತಾಗಿದೆ. ಇದೀಗ ಟೀ-ಕಾಫಿ ಕುಡಿಯಲು ಹಾಗೂ ತಿಂಡಿ-ಊಟಕ್ಕೂ ಸಹ ಪೇಪರ್ ಪ್ಲೇಟ್-ಗ್ಲಾಸ್ ಬಳಸತೊಡಗಿದ್ದಾರೆ. ಕೆಲವರು ಬಳಸಿದ ಪ್ಲೇಟ್ ಹಾಗೂ ಕಪ್‌ಗಳನ್ನು ರಸ್ತೆ ಬದಿಯಲ್ಲಿ ಎಸೆಯುತ್ತಿದ್ದು, ಪರಿಸರಕ್ಕೆ ಹಾನಿಯಾಗುತ್ತಿದೆ. ಹೀಗಾಗಿ ಹೋಟೆಲ್, ಸಭೆ-ಸಮಾರಂಭ, ಮದುವೆ ಹಾಲ್‌ಗಳಲ್ಲೂ ಸ್ಟೀಲ್ ಲೋಟ, ತಟ್ಟೆಗಳನ್ನೇ ಬಳಸುವಂತೆ ನಗರಸಭೆ ಅಧಿಕಾರಿಗಳು ಸೂಚನೆ ನೀಡುತ್ತಿದ್ದಾರೆ.

    ಇಪ್ಪತ್ತು ಸಾವಿರ ಬಟ್ಟೆಚೀಲ ವಿತರಣೆ

    ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬಳಕೆ ಮಾಡಬಾರದೆಂದು ಸಾರ್ವಜನಿಕರಿಗೆ ಮನವರಿಕೆ ಮಾಡಲು ನಗರಸಭೆ ಅಭಿಯಾನವನ್ನೂ ನಡೆಸುತ್ತಿದೆ. 20 ಸಾವಿರದಷ್ಟು ಬಟ್ಟೆ ಚೀಲಗಳನ್ನು ನಗರಸಭೆ ವತಿಯಿಂದ ಸಿದ್ಧಪಡಿಸಿ, ಮಾರುಕಟ್ಟೆಗೆ ಬಂದ ಜನರಿಗೆ ಉಚಿತವಾಗಿ ವಿತರಿಸಿ, ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸಲಾಗುತ್ತಿದೆ. ಮನೆಯಿಂದ ಮಾರುಕಟ್ಟೆಗೆ ಬರುವಾಗ ಬಟ್ಟೆ ಚೀಲ ತರುವಂತೆ ತಿಳಿಹೇಳಲಾಗುತ್ತಿದೆ. ಅಲ್ಲದೆ, ನಗರಸಭೆಯ ಕಿರಿಯ ಆರೋಗ್ಯ ನಿರೀಕ್ಷಕರು, ಸ್ಯಾನಿಟರಿ ಸೂಪರ್‌ವೈಸರ್‌ಗಳು ಹಾಗೂ ಪೌರಕಾರ್ಮಿಕರು ಆಗಾಗ ಅಂಗಡಿ, ಹೋಟೆಲ್‌ಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಿ ಪ್ಲಾಸ್ಟಿಕ್ ಚೀಲಗಳನ್ನು ವಶಕ್ಕೆ ಪಡೆದು ದಂಡ ಹಾಕುತ್ತಿದ್ದಾರೆ. ಉದ್ದಿಮೆದಾರರು, ವ್ಯಾಪಾರಿಗಳು ನಿಷೇಧಿತ ಪ್ಲಾಸ್ಟಿಕ್ ಉಪಯೋಗಿಸುವುದು ಕಂಡುಬಂದಲ್ಲಿ ಅವರ ಉದ್ದಿಮೆಯ ಪರವಾನಗಿ ರದ್ದು ಮಾಡುವುದಾಗಿಯೂ ಎಚ್ಚರಿಕೆ ನೀಡುತ್ತಿದ್ದಾರೆ.

    ಉಡುಪಿ ನಗರಸಭೆಯಿಂದ ಅಂಗಡಿ, ಹೋಟೆಲ್‌ಗಳ ಮೇಲೆ ದಾಳಿ: ಪ್ಲಾಸ್ಟಿಕ್ ಬಳಕೆಗೆ ದಂಡ

    ಜನರ ಆರೋಗ್ಯ ರಕ್ಷಣೆ, ಪರಿಸರದ ಸಂರಕ್ಷಣೆಯೊಂದಿಗೆ ಉಡುಪಿ ನಗರವನ್ನು ಕಸಮುಕ್ತ ನಗರವನ್ನಾಗಿ ವಾಡುವುದು ಸರ್ಕಾರದ ಉದ್ದೇಶ. ಸಾರ್ವಜನಿಕರು ಈ ಕಾರ್ಯಕ್ಕಾಗಿ ನಗರಸಭೆಯೊಂದಿಗೆ ಕೈಜೋಡಿಸಬೇಕು. ಎಲ್ಲೆಂದರಲ್ಲಿ ಕಸ ಎಸೆಯಬಾರದು. ತ್ಯಾಜ್ಯ ವಸ್ತುಗಳನ್ನು ಕಡಿಮೆ ವಾಡಲು ಮರುಬಳಕೆಯ ವಸ್ತುಗಳಾದ ಸ್ಟೀಲ್ ಲೋಟ, ತಟ್ಟೆ, ಬಟ್ಟೆಯ ಚೀಲಗಳನ್ನೇ ಕಡ್ಡಾಯವಾಗಿ ಬಳಸಬೇಕು.
    -ರಾಯಪ್ಪ ಆಯುಕ್ತ, ನಗರಸಭೆ ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts