More

    ಪೊಲೀಸರ ಎದುರೇ ಘೋಷಣೆ ಕೂಗಿದ ಶೃಂಗೇರಿಯ ನಕ್ಸಲ್ ಶ್ರೀಮತಿ: ಸದಾಶಿವ ಗೌಡ ಪ್ರಕರಣದ ಸಂಬಂಧ ವಿಚಾರಣೆ

    ವಿಜಯವಾಣಿ ಸುದ್ದಿಜಾಲ ಕಾರ್ಕಳ
    ಕೇರಳ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ನಕ್ಸಲ್ ನಾಯಕಿ ಶ್ರೀಮತಿ ಅಲಿಯಾಸ್ ಉಣ್ಣಿಮಾಯಾಳನ್ನು(28) ವಿಚಾರಣೆಗಾಗಿ ಪೊಲೀಸರು ಕಾರ್ಕಳಕ್ಕೆ ಕರೆತಂದಿದ್ದಾರೆ.

    ಶ್ವಾನದಳದ ಬಿಗು ಭದ್ರತೆಯಲ್ಲಿ ವಿಚಾರಣೆ

    ಕಾರ್ಕಳ ಡಿವೈಎಸ್‌ಪಿ ಅರವಿಂದ್ ಎನ್.ಕಲಗುಜ್ಜಿ ಮಾರ್ಗದರ್ಶನದಲ್ಲಿ ತನಿಖೆ ನಡೆಯುತಿದ್ದು ಎಎನ್‌ಎಫ್, ಪೊಲೀಸ್ ಪಡೆ, ಶ್ವಾನದಳದ ಬಿಗುಭದ್ರತೆ ಮಾಡಲಾಗಿತ್ತು. ಆಕೆಯನ್ನು ಕಬ್ಬಿನಾಲೆಗೆ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಲಾಗಿದೆ. ನಗರ ಠಾಣೆಗೂ ಭದ್ರತೆ ಒದಗಿಸಲಾಗಿದೆ.

    15ಕ್ಕೂ ಹೆಚ್ಚು ಪ್ರಕರಣದಲ್ಲಿ ಆರೋಪಿ

    ಪೊಲೀಸರಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ನಕ್ಸಲ್ ನಾಯಕಿ ಶ್ರೀಮತಿ ಮೂಲತಃ ಶೃಂಗೇರಿ ನಿವಾಸಿ. ಶೃಂಗೇರಿ ತಾಲೂಕು ಬೇಗಾರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಗೋಡುಕೊಡಿಗೆಯ ಶ್ರೀಮತಿ 2007ರಿಂದ ನಾಪತ್ತೆಯಾಗಿದ್ದು, ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯಳಾಗಿದ್ದಳು. ತನಿಕೋಡು ಚೆಕ್‌ಪೋಸ್ಟ್ ಅರಣ್ಯ ಇಲಾಖೆ ತಪಾಸಣೆ ಕೊಠಡಿ ಧ್ವಂಸ, ಮಾತೊಳ್ಳಿಯಲ್ಲಿ ಪೊಲೀಸರೊಂದಿಗೆ ಗುಂಡಿನ ಚಕಮಕಿ ಸೇರಿದಂತೆ ವಿವಿಧ ಠಾಣೆಗಳಲ್ಲಿ ಶ್ರೀಮತಿ ವಿರುದ್ಧ 15ಕ್ಕೂ ಹೆಚ್ಚು ಪ್ರಕರಣಗಳಿವೆ.

    ಪೊಲೀಸರ ಎದುರೇ ಘೋಷಣೆ ಕೂಗಿದ ಶೃಂಗೇರಿಯ ನಕ್ಸಲ್ ಶ್ರೀಮತಿ: ಸದಾಶಿವ ಗೌಡ ಪ್ರಕರಣದ ಸಂಬಂಧ ವಿಚಾರಣೆ

    ನವೆಂಬರ್‌ನಲ್ಲಿ ಸೆರೆಸಿಕ್ಕಳು

    2023ರ ನ.7ರಂದು ಕೇರಳ ಪೊಲೀಸರಿಗೆ ಸೆರೆಸಿಕ್ಕಿದ್ದು, ನಂತರ ಕೇರಳ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಳು. ಫೆ.13ರಂದು ರಾತ್ರಿ ಕಾರ್ಕಳ ನಗರ ಠಾಣೆ ಪೊಲೀಸರು ಬಿಗಿ ಭದ್ರತೆಯಲ್ಲಿ ಕರೆತಂದಿದ್ದಾರೆ. 14ರಂದು ಆಕೆಯನ್ನು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಫೆ.17ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಈಕೆಯ ವಿರುದ್ಧ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ 13ಕ್ಕೂ ಹೆಚ್ಚು ಪ್ರಕರಣಗಳಿವೆ. ಕಾರ್ಕಳದಲ್ಲಿ ಒಂದು ಪ್ರಕರಣ ಈಕೆಯ ಮೇಲಿದೆ. ಹೆಬ್ರಿ ಠಾಣಾ ವ್ಯಾಪ್ತಿಯ ಕಬ್ಬಿನಾಲೆಯ ಪ್ರದೇಶವೊಂದರಲ್ಲಿ ಸ್ಥಳ ಮಹಜರು ಮಾಡಲಾಗಿದೆ.

    ಘೋಷಣೆ ಕೂಗಿದ ನಕ್ಸಲ್ ನಾಯಕಿ ಶ್ರೀಮತಿ

    ಶ್ರೀಮತಿ ಯಾನೆ ಉಣ್ಣಿಮಾಯಾ ಗುರುವಾರ ಸಂಜೆ ಕಾರ್ಕಳ ನ್ಯಾಯಾಲಯಕ್ಕೆ ಹಾಜರಿಪಡಿಸುವ ವೇಳೆ ಮಾಧ್ಯಮದವರನ್ನು ಕಂಡು ಸಿಪಿಐ ಮಾವೋ ಜಿಂದಾಬಾದ್ ಎಂದು ಘೋಷಣೆ ಕೂಗುತ್ತ್ತ ಜೈಕಾರ ಹಾಕಿದ್ದಾಳೆ. 2011ರ ನ.19ರಂದು ಕಬ್ಬಿನಾಲೆ ಪ್ರದೇಶದಲ್ಲಿ ನಡೆದ ಸದಾಶಿವ ಗೌಡ ಎಂಬುವವರ ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಶ್ರೀಮತಿಯ ವಿಚಾರಣೆ ಮಾಡಲಾಗುತ್ತಿದೆ. ನಕ್ಸಲ್ ಮಾಹಿತಿದಾರ ಸದಾಶಿವ ಗೌಡ ಅವರನ್ನು ನಕ್ಸಲ್ ತಂಡ ಅಪಹರಿಸಿ ಗುಂಡು ಹಾರಿಸಿ ಕೊಲೆ ಮಾಡಿದ್ದು ಈ ತಂಡದಲ್ಲಿ ಶ್ರೀಮತಿ ಕೂಡ ಒಳಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts