More

    ಕರ್ನಾಟಕದಲ್ಲೇ ಅತೀ ದೊಡ್ಡ ಗರ್ಭಗುಡಿಯುಳ್ಳ ಕೊಕ್ಕನಬೈಲು ವಂಡಾರು ಶಿಲಾದೇಗುಲ ಲೋಕಾರ್ಪಣೆ: ಮೃತ್ತಿಕೆ ಪ್ರಸಾದ ಖ್ಯಾತಿ

    ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
    ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೊಕ್ಕನಬೈಲು ವಂಡಾರು ಬಾಯರಿ ಕುಟುಂಬಸ್ಥರು ನಂಬಿರುವ ಮೂಲ ನಾಗದೇವರ ದಿವ್ಯ ಸಾನ್ನಿಧ್ಯದಲ್ಲಿ ಫೆ.17ರಿಂದ ಫೆ.19ರ ವರೆಗೆ ಶಿಲಾದೇಗುಲ ಲೋಕಾರ್ಪಣೆ, ಅಷ್ಟಪವಿತ್ರ ನಾಗಮಂಡಲೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿರುವುದು.

    500 ಬಿಂಬಗಳುಳ್ಳ ಕ್ಷೇತ್ರ

    ಇಲ್ಲಿ ಸುಮಾರು 500 ನಾಗಶಿಲೆಗಳನ್ನು ಸ್ಥಾಪಿಸಲಾಗಿದೆ. ನಾಗಮಂಡಲ ಮತ್ತು ಆಶ್ಲೇಷಾ ಬಲಿ ಕರಾವಳಿಯಲ್ಲಿ ನಾಗದೇವರ ಪ್ರೀತ್ಯರ್ಥ ಮಾಡುವ ವಿಶೇಷ ಸೇವೆಗಳು. ಮದುವೆ ವಿಳಂಬ, ಸಂತಾನ ತೊಂದರೆ, ಚರ್ಮವ್ಯಾಧಿ, ನರ ದೋಷ, ದೃಷ್ಟಿದೋಷ, ವ್ಯಾಧಿ ನಿವಾರಣೆಯಾಗುವ ಸ್ಥಳ ಇದಾಗಿದೆ. ಇಲ್ಲಿ ಪ್ರಧಾನವಾಗಿ ಮುಖ್ಯಸ್ಥ ರಮೇಶ್ ಬಾಯರಿ, ಅವರ ಅಜ್ಜ, ತಂದೆ ಅವರ ಮೂರು ತಲೆಮಾರಿನಲ್ಲಿ ನಾಗ ಪ್ರತಿಷ್ಠಾಪನೆ ಮಾಡಲಾಗಿದೆ.

    ಕರ್ನಾಟಕದಲ್ಲೇ ಅತೀ ದೊಡ್ಡ ಗರ್ಭಗುಡಿ

    ಕೇರಳದ ಮುನಿಯಾಳದ ಪ್ರಸನ್ನ ಭಟ್ ವಾಸ್ತುಶಾಸ್ತ್ರಜ್ಞರು. ಇಲ್ಲಿ ನಿರ್ಮಿಸಿದ ನಾಗನ ಗರ್ಭಗುಡಿ ಕರ್ನಾಟಕದಲ್ಲಿ ಅತೀ ದೊಡ್ಡದು. ರಚನಾ ಶಾಸ್ತ್ರೀಯವಾಗಿ ಕಮಲಪುಷ್ಪದ ಆಕಾರದಲ್ಲಿದೆ. ಇಲ್ಲಿ ಕಬ್ಬಿಣ ಅಥವಾ ಸ್ಟೀಲ್ ಬಳಕೆ ಮಾಡಿಲ್ಲ. ತಾಮ್ರದ ಮೊಳೆಗಳು, ವಸ್ತುಗಳು ಬಳಕೆಯಾಗಿದೆ. ನಾಗದೇವರು ತೋರಿಸಿದ ನಾಗತೀರ್ಥ ಬಾವಿ ಇಲ್ಲಿದ್ದು ಅತೀ ಕಡಿಮೆ ಆಳದಲ್ಲಿ ನೀರು ದೊರಕಿದ್ದು, ಸದಾಕಾಲ ತುಂಬಿರುತ್ತದೆ. ಬಿಂಬ ಅಶುದ್ಧಿಯಾಗಬಾರದು ಎನ್ನುವ ಕಾರಣಕ್ಕೆ ನೀರಿನಲ್ಲಿ ಬಿಂಬವಿಟ್ಟು ಬಳಿಕ ಧಾರ್ಮಿಕ ವಿಧಿ ನೆರವೇರಿಸಲಾಗುತ್ತದೆ.

    ಕರ್ನಾಟಕದಲ್ಲೇ ಅತೀ ದೊಡ್ಡ ಗರ್ಭಗುಡಿಯುಳ್ಳ ಕೊಕ್ಕನಬೈಲು ವಂಡಾರು ಶಿಲಾದೇಗುಲ ಲೋಕಾರ್ಪಣೆ: ಮೃತ್ತಿಕೆ ಪ್ರಸಾದ ಖ್ಯಾತಿ

    ಮೃತ್ತಿಕೆ ಪ್ರಸಾದ ಖ್ಯಾತಿ

    ನಾಗನು ಭೂಧರ. ಇಲ್ಲಿನ ಹುತ್ತದಲ್ಲಿ ನಾಗದೇವರು ವಾಸವಾಗಿದ್ದು, ಸಂಚಾರಕ್ಕಾಗಿ ದೇವಳದ ನಾಲ್ಕು ಕಡೆಗಳಲ್ಲಿ ದ್ವಾರಗಳನ್ನು ನಿರ್ಮಿಸಲಾಗಿದೆ. ನಾಗನು ವಾಸವಿರುವ ಸ್ಥಳದ ಮೃತ್ತಿಕೆಯನ್ನು ಜೌಷದ ರೂಪವಾಗಿ ಸ್ವೀಕರಿಸಿದರೆ ವ್ಯಾಧಿ ನಿವಾರಣೆಯಾಗುವ ನಂಬಿಕೆ ಇದೆ.

    ಹೊರೆಕಾಣಿಕೆ ಸಮರ್ಪಣೆ

    ಹೊರೆಕಾಣಿಕೆ ಸಲ್ಲಿಸಲು ಇಚ್ಛಿಸುವ ಭಕ್ತರು ಫೆ.15ನೇ ಗುರುವಾರ ಬೆಳಗ್ಗಿನಿಂದ ದೇವಸ್ಥಾನದ ಆವರಣಕ್ಕೆ ತಲುಪಿಸಬಹುದು. 19ರಂದು ಮಧ್ಯಾಹ್ನ 2.30ರಿಂದ 5ರ ವರೆಗೆ ಪಂಡಿತ್ ಡಾ.ಪ್ರವೀಣ ಗೋಡ್ಖಿಂಡಿ ಇವರಿಂದ ಕೊಳಲು ವಾದನ ಜರುಗಲಿರುವುದು ಎಂದು ರಮೇಶ್ ಬಾಯರಿ ತಿಳಿಸಿದ್ದಾರೆ.

    17ರಂದು ಬೆಳಗ್ಗೆ ಪ್ರಾತಃ ಸೂಕ್ತ ಪಠನ, ಕುಲದೇವತಾ ಪ್ರಾರ್ಥನೆ

    ಬೆಳಗ್ಗೆ ಪ್ರಾತಃ ಸೂಕ್ತ ಪಠನ, ಕುಲದೇವತಾ ಪ್ರಾರ್ಥನೆ, ಗುರುಗಣಪತಿ ಪೂಜೆ, ಪುಣ್ಯಾಹ ವಾಚನ, ನಾಂದಿ ಸಮಾರಾಧನಾ, ಮಹಾಸಂಕಲ್ಪ, ಮಧುಪರ್ಕ ಪೂಜೆ, ಋತ್ವಿಗ್ವರಣೆ, ಕೃಚ್ರಾಚರಣೆ, ಪಂಚಗವ್ಯಹೋಮ, ದ್ವಾದಶನಾಳಿಕೇರ ಮಹಾಗಣಪತಿ ಹೋಮ, ನವಗ್ರಹ ಹೋಮ, ಕೂಪಶಾಂತಿ, ಗೇಹಪ್ರತಿಗ್ರಹ, ಕರ್ಮಸಮಾಪ್ತಿ, ಸಂಜೆ: ಸ್ಥಾನಶುದ್ಧಿ, ಪ್ರಾಸಾದ ಶುಧ್ದಿ, ಮಂಟಪ ಸಂಸ್ಕಾರ, ರಾಕ್ಷೋಘ್ನಹೋಮ, ವಾಸ್ತು ಹೋಮ, ವಾಸ್ತುಪೂಜಾಬಲಿ, ಬಿಂಬಜಲಾಧಿವಾಸಪೂಜಾ, ಅಕ್ಷತಹೋಮ, ಬಿಂಬಶುದ್ಧಿ, ಕಲಶಸ್ಥಾಪನಾ, ಬಿಂಬಶುದ್ಧಿ ಅಧಿವಾಸ ಹೋಮ, ಶಯ್ಯಕಲ್ಪಾರಾಧನೆ, ಬಿಂಬಶುದ್ಧಿಪೂರ್ವಕ ನೇತ್ರೋನ್ಮೀಲನ, ಬಿಂಬಾಧಿವಾಸಪೂಜಾ, ಅಧಿವಾಸಾದಿ ಹೋಮ, ಶಿಖರಾಧಿವಾಸಪೂಜಾ, ಪೀಠಾಧಿವಾಸಪೂಜಾ, ಪ್ರಸಾದಾಧಿವಾಸಪೂಜಾ, ಕರ್ಮಸಮಾಪ್ತಿ ನಡೆಯಲಿದೆ.

    18ರಂದು ಬೆಳಗ್ಗೆ ಶ್ರೀನಾಗದೇವರ ಪುನಃ ಪ್ರತಿಷ್ಠಾಪನಾ ಮಹೋತ್ಸವ

    ಬೆಳಗ್ಗೆ ಶ್ರೀನಾಗದೇವರ ಪುನಃ ಪ್ರತಿಷ್ಠಾಪನಾ ಮಹೋತ್ಸವ, ಜೀವಕುಂಭಾಭಿಷೇಕ, ಮಹಾಪ್ರಾಣಪ್ರತಿಷ್ಠಾನಾನ್ಯಾಸಾದಿ, ಪವಮಾನಹೋಮ, ಕೂಷ್ಮಾಂಡಹೋಮ, ಗಾಯತ್ರೀ ಹೋಮ, ತತ್ವಹೋಮ, ಪರಿಕಲಶೈಃಸಹಬ್ರಹ್ಮಕಲಶ ಸ್ಥಾಪನೆ,ಪರಿಕಶೈಃಸಹಬ್ರಹ್ಮಕಲಶಾಭಿಷೇಕ, ವಟು, ಬ್ರಾಹ್ಮಣ, ಸುವಾಸಿನಿ, ದಂಪತಿ, ಆಚಾರ್ಯಪೂಜೆ, ಮಹಾಪೂಜೆ, ತೀರ್ಥಪ್ರಸಾದ ವಿತರಣೆ, ಸಂಜೆ: 5.30ಕ್ಕೆ ಶ್ರೀಶಾರದಾ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಶ್ರೀಶಂಕರಾಚಾರ್ಯ ಅನಂತ ಶ್ರೀವಿಭೂಷಿತ ಭಾರತೀ ತೀರ್ಥ ಮಹಾಸ್ವಾಮಿ ಅವರ ಕರಕಮಲಸಂಜಾತ ಜಗದ್ಗುರು ಶ್ರೀ ವಿಧುಶೇಖರಭಾರತಿ ಮಹಾಸ್ವಾಮೀಜಿ ಆಗಮನ, ಶ್ರೀನಾಗದೇವರ ಸಾನ್ನಿಧ್ಯದಲ್ಲಿ ಪ್ರಾಯಶ್ಚಿತ ಆಶ್ಲೇಷಾ ಬಲಿ, ನಾಗಮಂಡಲ ವೇದಿಕೆಗೆ ರಾಕ್ಷೋಘ್ನ ಹೋಮ, ವಾಸ್ತು ಪೂಜಾ ಬಲಿ, ಜಗದ್ಗುರುಗಳಿಂದ ಚಂದ್ರಮೌಳೀಶ್ವರ ದೇವರ ಪೂಜೆ, ಪ್ರಸಾದ ವಿತರಣೆ, ಕರ್ಮ ಸಮಾಪ್ತಿ ನಡೆಯಲಿದೆ.

    19ರಂದು ಚತುರ್ವೇದ ಪಾರಾಯಣ, ಆಶ್ಲೇಷಾ ಬಲಿ ಉದ್ಯಾಪನ ಹೋಮ

    ಸೋಮವಾರ ಬೆಳಗ್ಗೆ ಚತುರ್ವೇದ ಪಾರಾಯಣ, ಆಶ್ಲೇಷಾ ಬಲಿ ಉದ್ಯಾಪನ ಹೋಮ, ಸುಬ್ರಹ್ಮಣ್ಯಹೋಮ, ಪಂಚದುರ್ಗಾಹೋಮ, ಸಮಗ್ರ ರುದ್ರೈಕಾದಶಿನೀ ಹೋಮ, ದಾನಾದಿಗಳು, ಜಗದ್ಗುರುಗಳಿಂದ ಶ್ರೀದೇವರಿಗೆ ಕುಂಬಾಭಿಷೇಕ ಪೂರ್ವಕ ಮಹಾಪೂಜೆ, ಶಿಖರಾಭಿಷೇಕ, ಪಾದಪೂಜೆ, ಭಿನ್ನವತ್ತಳೆ ಸಮರ್ಪಣೆ, ಶ್ರೀಗಳಿಂದ ಅನುಗ್ರಹ ಆಶೀರ್ವಚನ, ಭಕ್ತರಿಗೆ ಫಲಮಂತ್ರಾಕ್ಷತೆ ಮತ್ತು ಮಹಾ ಅನ್ನಸಂತರ್ಪಣೆ. ಸಂಜೆ 6.30ರಿಂದ ಕ್ಷೀರಾರ್ಘ ಪೂರ್ವಕ ಹಾಲಿಟ್ಟು ಸೇವೆ, ಅಷ್ಟಪವಿತ್ರ ನಾಗಮಂಡಲೋತ್ಸವ ಸೇವೆ, ಪ್ರಸಾದ ವಿತರಣೆ, ರಾಷ್ಟ್ರಾಶೀರ್ವಚನ, ಮಂತ್ರಾಕ್ಷತೆ ನಡೆಯಲಿದೆ ಎಂದು ಬಾಯರಿ ಕುಟುಂಬಸ್ಥರ ಪರವಾಗಿ ವಂಡಾರು ರಮೇಶ್ ಬಾಯರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts