More

    ಸೋದೆ ಶ್ರೀವಾದಿರಾಜರಿಂದ ಸ್ಥಾಪಿತ ಕಬ್ಬಿನಾಲೆ ಕೆಳಮಠ ದೇವಸ್ಥಾನದ ಶ್ರೀಮನ್ಮಹಾರಥೋತ್ಸವ

    ವಿಜಯವಾಣಿ ಸುದ್ದಿಜಾಲ ಹೆಬ್ರಿ
    ಕಬ್ಬಿನಾಲೆ ಕೆಳಮಠ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ರಥೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು 16ರಂದು ಶ್ರೀಮನ್ಮಹಾರಥೋತ್ಸವ ನಡೆಯಲಿದೆ. ಕೆ.ಎಸ್.ರಾಮಕೃಷ್ಣ ತಂತ್ರಿ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕ ನಾರಾಯಣ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ನಡೆಯಲಿವೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಘವೇಂದ್ರ ಭಟ್ ತಿಳಿಸಿದ್ದಾರೆ.

    ಸೋದೆ ಶ್ರೀವಾದಿರಾಜರಿಂದ ಸ್ಥಾಪನೆ

    ಐದು ಶತಮಾನಗಳ ಹಿಂದೆ ಶ್ರೀಸೋದೆ ಮಠದ ಯತಿವರೇಣ್ಯ ಶ್ರೀವಾದಿರಾಜ ತೀರ್ಥರು ಸಹ್ಯಾದ್ರಿಯ ಮಡಿಲಲ್ಲಿರುವ ಕಬ್ಬಿನಾಲೆ ಗ್ರಾಮಕ್ಕೆ ಬಂದು ಶ್ರೀರುಕ್ಕಿಣೀ ಸತ್ಯಭಾಮಾ ಸಹಿತ ಶೀ ಗೋಪಾಲಕೃಷ್ಣ ದೇವರನ್ನು ಪ್ರತಿಷ್ಠಾಪನೆ ಮಾಡಿದರೆಂಬ ಐತಿಹ್ಯವಿದೆ. ಪಂಚಲೋಹದಿಂದ ನಿರ್ಮಿತ ಮೂರ್ತಿಗಳು ಚಾಲುಕ್ಯ ಶೈಲಿಯ ಸುಂದರ ಶಿಲ್ಪಗಳಾಗಿವೆ. ಎರಡು ಕೈಗಳಲ್ಲಿ ಶಂಖ, ಚಕ್ರಗಳನ್ನು ಧರಿಸಿ, ಮತ್ತೆರಡು ಕೈಗಳಿಂದ ಕೊಳಲನ್ನು ಊದುತ್ತಿರುವ ತ್ರಿಭಂಗಿಯ ಶ್ರೀ ಗೋಪಾಲಕೃಷ್ಣ ಮತ್ತು ಉಭಯಪಾರ್ಶ್ವಗಳಲ್ಲಿ ನಿಂತ ರುಕ್ಕಿಣೀ ಸತ್ಯಭಾಮೆಯರ ವಿಗ್ರಹಗಳು ನಯನ ಮನೋಹರವಾಗಿವೆ.

    ಸೋಣಾರತಿ, ಶಿಖರ ದೀಪ

    ಈ ದೇಗುಲದ ಪ್ರಾಕಾರದಲ್ಲಿ ನೆಲೆಯಾದ ಶ್ರೀ ಸತ್ಯದೇವತೆ ಮತ್ತು ಹೊರ ಆವರಣದಲ್ಲಿರುವ ಶ್ರೀ ನಾಗ ದೇವರು ಮತ್ತು ತುಸು ದೂರದಲ್ಲಿರುವ ಕಾಳರಾಹು ಕ್ಷೇತ್ರ ಸಂರಕ್ಷಣೆಯ ಕಾರಣಿಕ ಸನ್ನಿಧಾನಗಳು. ಸೋಣ ತಿಂಗಳಲ್ಲಿ ಪ್ರತಿದಿನವೂ ಸೋಣಾರತಿ, ಕಾರ್ತಿಕ ಮಾಸದ ಹುಣ್ಣಿಮೆಯಂದು ಶಿಖರ ದೀಪ, ರಥ ಸಪ್ತಮಿಯಂದು ನಡೆಯುವ ರಥೋತ್ಸವ ಮುಂತಾದವುಗಳು ಇಲ್ಲಿಯ ಪರ್ವ ದಿನಾಚರಣೆಗಳು. ತುಳಸಿ ಅರ್ಚನೆ, ರಂಗ ಪೂಜೆ, ಕರ್ಪೂರದಾರತಿ, ಶಿಖರ ದೀಪ ಪೂಜೆಗಳು ನಡೆಯುತ್ತವೆ. ಇಲ್ಲಿ ಹಿಂದಿನ ಕಾಲದಲ್ಲಿ ಯಥೇಚ್ಛ ಕಬ್ಬು ಬೆಳೆಯುತ್ತಿದ್ದರು. ಆಲೆಮನೆಗಳು ಇದ್ದವು. ಹೀಗಾಗಿ ಊರಿಗೆ ಕಬ್ಬಿನಾಲೆ ಎಂದು ಹೆಸರು ಬಂತು.

    ವಸಂತೋತ್ಸವ, ರಂಗಪೂಜೆ

    ಶುಕ್ರವಾರ ರಥಸಪ್ತಮಿ, ಪೂರ್ವಾಹ್ನ ಗಣಯಾಗ, ನವಕಲಶಾಭಿಷೇಕ, ಅಲಂಕಾರ ಪೂಜೆ, ತುಲಾಭಾರ, ರಥ ಸಂಪ್ರೋಕ್ಷಣೆ, ಮಹಾಪೂಜೆ, ರಥಾರೋಹಣ, ಪಲ್ಲಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಭಜನೆ, ದೀಪಾರಾಧನೆ, ರಥೋತ್ಸವ, ನರ್ತನ ಬಲಿ, ಕೆರೆದೀಪ, ಪಚ್ಚಡ ಸೇವೆ, ಕಟ್ಟೆಪೂಜೆ, ವಸಂತ ಮಂಟಪದಲ್ಲಿ ಪೂಜೆ, ವಸಂತೋತ್ಸವ, ರಂಗಪೂಜೆ, ಭೂತಬಲಿ, ಪ್ರಸಾದ ವಿತರಣೆ. ಶನಿವಾರ ಸಂಪ್ರೋಕ್ಷಣೆ, ಮಧ್ಯಾಹ್ನ ಹರಿವಾಣ ನೈವೇದ್ಯ ಸಂತರ್ಪಣೆ, ಭಜನೆ, ದೀಪಾರಾಧನೆ, ರಂಗಪೂಜೆ, ಉತ್ಸವ ಸೇವೆ, ಭಾನುವಾರ ಮಧ್ಯಾಹ್ನ ಹರಿವಾಣ ನೈವೇದ್ಯ ಸಂತರ್ಪಣೆ, ದೀಪಾರಾಧನೆ, ರಂಗಪೂಜೆ, ಸೋಮವಾರ ಮಧ್ಯಾಹ್ನ ಹರಿವಾಣ ನೈವೇದ್ಯ ಸಂತರ್ಪಣೆ. ಮಂಗಳವಾರ ಹರಿವಾಣ ನೈವೇದ್ಯ ಸಂತರ್ಪಣೆ, ರಾತ್ರಿ ದೀಪಾರಾಧನೆ, ರಂಗಪೂಜೆ ನಡೆಯಲಿದೆ.

    ಪ್ರಧಾನ ಅರ್ಚಕ ನಾರಾಯಣ ಭಟ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಘವೇಂದ್ರ ಭಟ್, ಪರ್ಯಾಯ ಅರ್ಚಕ ನಾರಾಯಣ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೆ.ಶ್ರೀನಿವಾಸ ಕಂಗಿನಾಯ, ನಾಗರಾಜ ಶೆಟ್ಟಿಗಾರ್, ರಾಜು ಪೂಜಾರಿ, ಕೆ.ಎಸ್.ನಾಗಭೂಷಣ ರಾವ್, ಸತೀಶ, ಪಾರಿಕಲ್ಲು ಇಂದಿರಾ ಹೆಬ್ಬಾರ್, ಕಸ್ತೂರಿ ಮೊದಲಾದವರು ಉಪಸ್ಥಿತರಿರುತ್ತಾರೆ.

    ಕಬ್ಬಿನಾಲೆ ಕೆಳಮಠ ದೇವಸ್ಥಾನದ ಶೀಮನ್ಮಹಾರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ಐದು ಶತಮಾನಗಳ ಇತಿಹಾಸವಿರುವ ದೇವಸ್ಥಾನಕ್ಕೆ ಹರಕೆ ಹೊತ್ತುಕೊಂಡರೆ ಇಷ್ಟಾರ್ಥ ಸಿದ್ಧಿಸುತ್ತದೆ. ಹಾಗಾಗಿ ಅನೇಕ ಊರುಗಳಿಂದ ಜನರು ದೇವಸ್ಥಾನಕ್ಕೆ ಆಗಮಿಸುತ್ತಾರೆ. ಊರಿನವರು ನಿರಂತರ ಸಹಕಾರ ನೀಡುತ್ತಾ ಬಂದಿರುವುದರಿಂದ ಎಲ್ಲ ವ್ಯವಸ್ಥೆ ಉತ್ತಮವಾಗಿದೆ.
    -ರಾಘವೇಂದ್ರ ಭಟ್
    ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts