More

    ಅರಣ್ಯಇಲಾಖೆ ವಿರುದ್ಧ ಪ್ರತಿಭಟನೆ: ರಸ್ತೆ ಅಭಿವೃದ್ಧಿಗೆ ತೊಡಕು


    ವಿಜಯವಾಣಿ ಸುದ್ದಿಜಾಲ ಹೆಬ್ರಿ

    ಮಠದಬೆಟ್ಟಿನ ಸೀತಾ ನದಿ ಸೇತುವೆ ಬಳಿ ರಸ್ತೆ ವಿಸ್ತರಣೆಗೆ ಅರಣ್ಯ ಇಲಾಖೆಯಿಂದ ತೊಡಕು ಉಂಟಾಗಿದೆ ಎಂದು ಆರೋಪಿಸಿ ಸಮಾನ ಮನಸ್ಕರ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.

    ಸಾವಿರಾರು ವಾಹನ ಓಡಾಡುವ ಈ ರಸ್ತೆ ಅತ್ಯಂತ ಚಿಕ್ಕದಾಗಿದ್ದು ಎರಡು ವಾಹನಗಳು ಏಕಕಾಲದಲ್ಲಿ ಸಾಗಲು ಸಾಧ್ಯವಿಲ್ಲ. ಇಕ್ಕೆಲಗಳಲ್ಲಿ ದೊಡ್ಡ ಗಾತ್ರದ ಎಡ್ಜ್‌ಗಳು ಇರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.

    5 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಅರಣ್ಯ ಇಲಾಖೆ ಕಾಮಗಾರಿ ಮಾಡಲು ಬಿಡದಿದ್ದಲ್ಲಿ ಹಿಂದೆ ಹೋಗುತ್ತದೆ. ಪಿಡಬ್ಲುೃಡಿ ಹಾಗೂ ಅರಣ್ಯ ಇಲಾಖೆ ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಬೇಕು. ರಸ್ತೆಯ ಬದಿಯ ಒಣ ಮರ ತೆರವುಗೊಳಿಸಬೇಕು ಎಂದು ಶ್ರೀಕಾಂತ ಪೂಜಾರಿ ಆಗ್ರಹಿಸಿದರು.
    ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಆರ್‌ಎಫ್‌ಒ ಗೌರವ ಮಾತನಾಡಿ, ಸ್ಥಳಕ್ಕೆ ಮೇಲಧಿಕಾರಿಗಳನ್ನು ಕರೆದುಕೊಂಡು ಬರಲಾಗುವುದು. ಎರಡು ದಿನದೊಳಗೆ ರಸ್ತೆ ಸಮಸ್ಯೆ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಾಗುವುದು ಎಂದರು.

    ಒಂದೂ ಮರ ಮುಟ್ಟುವುದಿಲ್ಲ

    ರಸ್ತೆ ಸಮೀಪ ಇರುವ ಯಾವುದೇ ಮರವನ್ನು ಮುಟ್ಟುವುದಿಲ್ಲ. ಕಾಡು ಪ್ರಾಣಿಗಳಿಗೆ ಸಮಸ್ಯೆ ಆಗದಂತೆ ಸಂಜೆ ಆರು ಗಂಟೆ ಒಳಗಾಗಿ ಕೆಲಸ ನಿಲ್ಲಿಸುತ್ತೇವೆ. ಒಂದು ವಾರ ಸಮಯ ನೀಡಿ. ಅಷ್ಟರೊಳಗಾಗಿ ಒಂದು ಕಿ.ಮೀ ರಸ್ತೆಯನ್ನು ಸಮರ್ಪಕವಾಗಿಸುತ್ತೇವೆ ಎಂದು ಪಿಡಬ್ಲುೃಡಿ ಗುತ್ತಿಗೆದಾರ ಚಾರ ವಾದಿರಾಜ್ ಶೆಟ್ಟಿ ಭರವಸೆಯಿತ್ತರು.

    ಅಧಿಕಾರಿಗಳ ಆಗಮನಕ್ಕೆ ಪಟ್ಟು

    ಅಹವಾಲು ಸ್ವೀಕರಿಸಲು ಅರಣ್ಯ ರಕ್ಷಕ ಬಂದಾಗ, ಸ್ಥಳಕ್ಕೆ ವಲಯ ಅರಣ್ಯ ಅಧಿಕಾರಿ ಬರಬೇಕೆಂದು ಪ್ರತಿಭಟನಾ ನಿರತರು ಪಟ್ಟು ಹಿಡಿದರು. ಬರದಿದ್ದಲ್ಲಿ ನಾವೆಲ್ಲ ಸೇರಿ ರಸ್ತೆ ತಡೆ ನಡೆಸುತ್ತೇವೆ ಎಂದಾಗ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ದೌಡಾಯಿಸಿದರು.

    ಒಂದು ಕಿಮೀ ವ್ಯಾಪ್ತಿಯಲ್ಲಿ ಸಮಸ್ಯೆ

    ಓರೆ-ಕೋರೆ ರಸ್ತೆಯಲ್ಲಿ ಭಾರಿ ವಾಹನಗಳು ಬಂದಾಗ ಸಣ್ಣ ವಾಹನಗಳು ಸಂಚರಿಸಲು ತಿಣುಕಾಡುತ್ತವೆ. ಎರಡು ವಾಹನಗಳ ಮಿರರ್‌ಗಳು ಹೊಡೆದುಕೊಂಡು ಹೋಗುತ್ತವೆ. ಚಾರದಲ್ಲಿ ಸೇತುವೆ ನಿರ್ಮಾಣ ಹಂತದಲ್ಲಿ ಇರುವುದರಿಂದ ಇದೇ ರಸ್ತೆಯನ್ನು ಮುಖ್ಯರಸ್ತೆಯನ್ನಾಗಿ ಜನ ಬಳಸುತ್ತಾರೆ. ಬ್ರಿಟಿಷ್ ಕಾಲದಲ್ಲಿ ಈ ರಸ್ತೆಯ ವಿಸ್ತರಣೆಗೆ ಕ್ರಮವಾಗಿದೆ ಎಂದು ಹಿರಿಯ ಕೃಷಿಕ ರಾಜೀವ ಶೆಟ್ಟಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts