More

    ಅರಣ್ಯವಾಸಿಗಳ ವನವಾಸಕ್ಕಿಲ್ಲ ಮುಕ್ತಿ: ಬಿಡುಗಡೆಯಾಗದ ಸರ್ಕಾರಿ ಅನುದಾನ: ಏಕಗಂಟಿಗೆ ಬೇಡಿಕೆ

    ಹರಿಪ್ರಸಾದ್ ನಂದಳಿಕೆ ಕಾರ್ಕಳ

    ಪಶ್ಚಿಮಘಟ್ಟ ತಪ್ಪಲು ಪ್ರದೇಶದಲ್ಲಿ ಅರಣ್ಯದಲ್ಲೇ ಬದುಕು ಕಟ್ಟಿಕೊಂಡ ನೂರಾರು ಕುಟುಂಬಗಳು ಕಾಡು ಬಿಟ್ಟು ಮುಖ್ಯವಾಹಿನಿಯಲ್ಲಿ ಬದುಕು ನಡೆಸಲು ಇಚ್ಛಿಸಿದರೂ, ಸರ್ಕಾರದ ನೀಡುವ ಅನುದಾನ ಏಕಗಂಟಿನಲ್ಲಿ ಬಿಡುಗಡೆಗೊಳ್ಳದೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ಅರಣ್ಯದಲ್ಲಿರುವ 694 ಕುಟುಂಬಗಳು ಅರಣ್ಯದಿಂದ ಹೊರಬಾರದೆ ವನವಾಸ ಅನುಭವಿಸುವಂತಾಗಿದೆ.

    ಅರಣ್ಯದಿಂದ ಹೊರಬರಲು ಒಪ್ಪುವ ಕುಟುಂಬಗಳಿಗೆ ಸರ್ಕಾರ ಪ್ರತಿ ವರ್ಷ 10 ಕೋಟಿ ರೂ.ಅನುದಾನವನ್ನು ಅರಣ್ಯ ಇಲಾಖೆಗೆ ಬಿಡುಗಡೆ ಮಾಡುತ್ತಿದೆ. ಆದರೆ ಅಂದಾಜಿನ ಪ್ರಕಾರ ಕುದುರೆಮುಖ ಉದ್ಯಾನ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಿದ ಕುಟುಂಬಗಳಿಗೆ ಒಮ್ಮೆಲೇ ಪರಿಹಾರ ವಿತರಿಸಲು ಕನಿಷ್ಠ 125 ಕೋಟಿ ರೂ.ಅನುದಾನ ಬೇಕು. ಆದರೆ ಸರ್ಕಾರ ಒಂದೇ ಬಾರಿಗೆ ಅನುದಾನ ಬಿಡುಗಡೆಗೊಳಿಸದ ಪರಿಣಾಮ ನೂರಾರು ಕುಟುಂಬಗಳು ಅರಣ್ಯದಲ್ಲೇ ಉಳಿಯಬೇಕಾಗಿದೆ. ವಿವಿಧ ಜಿಲ್ಲೆಗಳಿಂದ ಈ ಸಂಬಂಧ ಪ್ರಸ್ತಾವನೆಗಳು ಸರ್ಕಾರಕ್ಕೆ ಸಲ್ಲಿಸಿದ್ದರೂ ಅನುದಾನ ಬಿಡುಗಡೆಯಾಗಿಲ್ಲ.

    ಅರಣ್ಯಾವಾಸಿಗಳ ಬೇಡಿಕೆ

    ಅರಣ್ಯದಿಂದ ಹೊರಬರಲು ಸಿದ್ಧರಿರುವ ಕುಟುಂಬಗಳಿಗೆ ಪರಿಹಾರ ಸಿಗಬೇಕು. ಪಶ್ಚಿಮಘಟ್ಟ ಪ್ರದೇಶವನ್ನು 5ನೇ ಅನುಸೂಚಿತ ಪ್ರದೇಶವೆಂದು ಘೋಷಿಸಬೇಕು, ಸಮುದಾಯದ ಅಸ್ಮಿತೆ, ಸಂಸ್ಕೃತಿ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಪರಿಸ್ಥಿತಿಯ ಅಧ್ಯಯನ ನಡೆಸಬೇಕು. ಮಲೆಕುಡಿಯ ಸೇರಿದಂತೆ 12 ಅರಣ್ಯ ಮೂಲ ಬುಡಕಟ್ಟು ಜನಾಂಗದವರಿಗೆ ಪ್ರಾತಿನಿಧಿಕ ಮೀಸಲು ನೀಡಬೇಕು, ಪಿವಿಟಿಜಿ ಮಾನದಂಡ ಪುನಾರಚಿಸಿ ಮಲೆಕುಡಿಯ ಸಮುದಾಯವನ್ನು ಸೇರಿಸಬೇಕು, ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಅರಣ್ಯ ಹಕ್ಕು ಕಾಯ್ದೆ ಸಮರ್ಪಕ ಅನುಷ್ಠಾನ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಜನವಸತಿ ಪ್ರದೇಶವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಕನಿಷ್ಠ ಮೂಲ ಸೌಲಭ್ಯ ನೀಡಬೇಕು. ಎಲ್ಲ ಇಲಾಖೆಗಳಲ್ಲಿ ಅರಣ್ಯ ಬುಡಕಟ್ಟು ಪರಿಶಿಷ್ಟ ಪಂಗಡವರಿಗೆ ಶೇ.50ರಷ್ಟು ಉದ್ಯೋಗ ಮೀಸಲು, ಅರಣ್ಯ ಮೂಲ ಬುಡಕಟ್ಟು ಜನಾಂಗದವರ ಪ್ರಗತಿಗಾಗಿ ಅಭಿವೃದ್ಧಿ ನಿಗಮ ರಚನೆ ಸಹಿತ ಹಲವು ಬೇಡಿಕೆಗಳಿವೆ.

    ಕೈಸೇರದ ಹಕ್ಕುಪತ್ರ

    ಕೇಂದ್ರ ಸರ್ಕಾರ 2006ರಲ್ಲಿ ಅರಣ್ಯ ಹಕ್ಕು ಕಾಯ್ದೆ ಜಾರಿಗೊಳಿಸಿ, ಹಕ್ಕುಪತ್ರ ವಿತರಿಸಲು ಸೂಚಿಸಿತ್ತು. ಆದರೆ ಇನ್ನೂ ಸಮರ್ಪಕವಾಗಿ ಜಾರಿಯಾಗಿಲ್ಲ. ಈ ಮಧ್ಯೆ, ಜಮೀನಿನ ದಾಖಲೆ ಪತ್ರಗಳಿದ್ದು, ಹೊರ ಬರಲು ಇಚ್ಛಿಸಿದವರಿಗೂ ಸರ್ಕಾರದ ಪರಿಹಾರ ಧನ ವಿತರಣೆಯಾಗುತ್ತಿಲ್ಲ ಎಂಬ ದೂರುಗಳಿವೆ. ಇತ್ತ ಕಸ್ತೂರಿರಂಗನ್, ಹುಲಿ ಯೋಜನೆಗಳ ಅನುಷ್ಠಾನದ ಸುದ್ದಿ ಅರಣ್ಯವಾಸಿಗಳ ನಿದ್ದೆಗೆಡಿಸಿದೆ. ಇದೀಗ ಮೂಲಸೌಕರ್ಯದಿಂದ ವಂಚಿತಗೊಂಡು ಅರಣ್ಯ ಪ್ರದೇಶದಲ್ಲೇ ಬದುಕು ಕಟ್ಟಿಕೊಂಡ ನೂರಾರು ಕುಟುಂಬಗಳಿಗೆ ಅನುದಾನವನ್ನು ಒಂದೇ ಬಾರಿಗೆ ಸರ್ಕಾರ ನೀಡಿದಲ್ಲಿ ವನವಾಸದಿಂದ ಹೊರಬಂದು ಅರಣ್ಯವಾಸಿಗಳು ಬದುಕು ಕಟ್ಟಿಕೊಳ್ಳಬಹುದು.

    ದಕ್ಷಿಣ ಕನ್ನಡ: ಅರ್ಜಿ ಸಲ್ಲಿಸಿರುವ ಕುಟುಂಬಗಳು 130, ಪರಿಹಾರ ವಿತರಣೆ 101, ಬಾಕಿ- 29, ಸ್ಥಳ ಮೌಲ್ಯ ಸರ್ವೇ 14.
    ಉಡುಪಿ: ಅರ್ಜಿ ಸಲ್ಲಿಸಿರುವ ಕುಟುಂಬಗಳು 76, ಪರಿಹಾರ ವಿತರಣೆ 14, ಬಾಕಿ- 62, ಸ್ಥಳ ಮೌಲ್ಯ ಸರ್ವೇ 12.
    ಚಿಕ್ಕಮಗಳೂರು ಜಿಲ್ಲೆ: ಅರ್ಜಿ ಸಲ್ಲಿಸಿರುವ ಕುಟುಂಬಗಳು 445, ಪರಿಹಾರ ವಿತರಣೆ-165, ಬಾಕಿ- 280, ಸ್ಥಳ ಮೌಲ್ಯ ಸರ್ವೇ 12.
    ಕುದುರೆಮುಖ ಉದ್ಯಾನವನ: ಕುದುರೆಮುಖ ಉದ್ಯಾನವನ ಒಟ್ಟು ಕುಟುಂಬಗಳು 1,382, ಪರಿಹಾರ ವಿತರಣೆ- 328, ಬಾಕಿ- 323, ಸ್ವಾಧೀನ ಪಡಿಸಿಕೊಂಡ ಜಾಗ 623.25 ಎಕರೆ.

    ಕುದುರೆಮುಖ ಉದ್ಯಾನವನಕ್ಕೆ ಸಂಬಂಧಿಸಿ 125 ಕೋಟಿ ರೂ. ಅನುದಾನದ ಅಗತ್ಯವಿದೆ. ಸರ್ಕಾರ ಪ್ರತಿವರ್ಷ 10 ಕೋಟಿ ರೂ.ಪರಿಹಾರ ಮೊತ್ತ ನೀಡುತ್ತಿದ್ದು, ವರ್ಷದಲ್ಲಿ ನಾಲ್ಕೈದು ಕುಟುಂಬಗಳಿಗಷ್ಟೇ ಪರಿಹಾರ ಕೊಡಲು ಸಾಧ್ಯ. ಏಕಗಂಟಿನಲ್ಲಿ ದೊಡ್ಡ ಮೊತ್ತ ಲಭಿಸಿದರೆ ಅನುಕೂಲ. ಜಿಲ್ಲಾ ವ್ಯಾಪ್ತಿಯಿಂದ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.

    ಡಾ.ಕರಿಕಾಳನ್
    ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts