ಧಾರವಾಡ: ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡರ ಕೊಲೆ ಕೇಸ್ನಲ್ಲಿ ಸಿಬಿಐ ಪೊಲೀಸರಿಂದ ಬಂಧನಕ್ಕೊಳಪಟ್ಟು, ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಇಂದು ಕೂಡ ಜಾಮೀನು ಸಿಕ್ಕಿಲ್ಲ.
ಹೈಕೋರ್ಟ್ ಅರ್ಜಿಯ ವಿಚಾರಣೆಯನ್ನು ಮುಂದೂಡಿರುವ ಹಿನ್ನೆಲೆಯಲ್ಲಿ ಇನ್ನೂ ಕೆಲವು ದಿನ ವಿನಯ್ ಜೈಲಿನಲ್ಲಿಯೇ ಕಳೆಯಬೇಕಿದೆ. ಇವರು ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಿಬಿಐ ಕಾಲಾವಕಾಶ ಕೇಳಿಕೊಂಡ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆಯನ್ನು ಮುಂದೂಡಲಾಗಿದೆ.
ನ.5ರಂದು ಬಂಧನಕ್ಕೊಳಪಟ್ಟಿದ್ದ ವಿನಯ್ ಕುಲಕರ್ಣಿಗೆ ಜಿಲ್ಲಾ ನ್ಯಾಯಾಲಯ ನ.9ರಂದು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ನಂತರ ನವೆಂಬರ್ 23ರಂದು ನ್ಯಾಯಾಂಗ ಬಂಧನದ ಮೊದಲ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿತ್ತು. ಮತ್ತೆ 14 ದಿನಗಳವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್ ಆದೇಶಿಸಿತ್ತು.
2016ರ ಜೂನ್ 15ರಲ್ಲಿ ತನ್ನದೇ ಮಾಲೀಕತ್ವದ ಉದಯ್ ಜಿಮ್ನಲ್ಲಿ ಯೋಗೀಶ್ ಗೌಡ ಬರ್ಬರವಾಗಿ ಹತ್ಯೆಯಾಗಿದ್ದರು. ಈ ಸಂಬಂಧ ಸಿಬಿಐ ವಿಚಾರಣೆ ಕೈಗೆತ್ತಿಕೊಂಡಿದೆ. ಕೊಲೆ ಕೇಸ್ನಲ್ಲಿ ವಿನಯ್ ಕುಲಕರ್ಣಿ ಕೈವಾಡವಿರುವ ಮತ್ತು ಪ್ರಭಾವ ಬಳಸಿ ಕೇಸು ಮುಚ್ಚಿ ಹಾಕಿರುವ ಆರೋಪ ಇದೆ.