ಮಂಗಳೂರು: ಕೆಲ ದಿನಗಳ ಹಿಂದೆ ಬರ್ಬರವಾಗಿ ಹತ್ಯೆಯಾಗಿರುವ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರ ಮನೆಗೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ಇದೇ ವೇಳೆ ತಮ್ಮ ಒಂದು ತಿಂಗಳ ಸಂಬಳವಾಗಿರುವ ಐದು ಲಕ್ಷ ರೂಪಾಯಿಗಳ ಚೆಕ್ ಅನ್ನು ಶೋಭಾ ಪ್ರವೀಣ್ ಕುಟುಂಬಸ್ಥರಿಗೆ ನೀಡಿದ್ದಾರೆ. ಅವರು ಕುಟುಂಬಕ್ಕೆ ಚೆಕ್ ಹಸ್ತಾಂತರಿಸಿದ್ದಾರೆ.
ತಮಗೆ ನ್ಯಾಯಕೊಡಿಸುವಂತೆ ಇದೇ ವೇಳೆ ಪ್ರವೀಣ್ ಕುಟುಂಬಸ್ಥರು ಸಚಿವೆಯ ಮುಂದೆ ಕಣ್ಣೀರಿಟ್ಟಿದ್ದಾರೆ. ಅವರಿಗೆ ನ್ಯಾಯ ಕೊಡಿಸುವ ಭರವಸೆಯನ್ನು ಶೋಭಾ ನೀಡಿದ್ದಾರೆ.
ಲೋಕಸಭೆಯಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದೀಯ ಸ್ಥಾನವನ್ನು ಪ್ರತಿನಿಧಿಸುವ ಶೋಭಾ ಕರಂದ್ಲಾಜೆ, ಇದಾಗಲೇ ಘಟನೆಯ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ಒಪ್ಪಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಎರಡು ದಿನಗಳ ಹಿಂದೆ ಪತ್ರ ಬರೆದಿದ್ದರು.
ಮುಸ್ಲಿಂ ಮೂಲಭೂತವಾದಿಗಳು, ಪಿಎಫ್‌ಐ, ಎಸ್‌ಡಿಪಿಐ ಮತ್ತು ಅಂತಹುದೇ ಗುಂಪುಗಳು ಹತ್ಯೆಗೆ ಕಾರಣವೆಂದು ಅವರು ಪತ್ರದಲ್ಲಿ ಆರೋಪಿಸಿದ್ದರು. ಜಿಲ್ಲೆಯಲ್ಲಿ ಸೌಹಾರ್ದತೆಗೆ ಭಂಗ ತರಲು ಯತ್ನಿಸುತ್ತಿರುವ ಮೂಲಭೂತವಾದಿ ಸಂಘಟನೆಗಳು ಕೊಲೆಯ ಹಿಂದೆ ಇದೆ ಎಂದಿದ್ದ ಶೋಭಾ, ನೆಟ್ಟಾರ್ ಮೇಲೆ ದಾಳಿ ನಡೆಸಲು ಕೇರಳ ನೋಂದಣಿ ಸಂಖ್ಯೆಯನ್ನು ಹೊಂದಿರುವ ಬೈಕ್ ನಲ್ಲಿ ಆರೋಪಿಗಳು ಬಂದಿದ್ದಾರೆ ಎಂದು ತಿಳಿಸಿದ್ದರು.
ಇದೇ ವೇಳೆ, ಪ್ರವೀಣ್ ಅವರ ಮೇಲೆ ದಾಳಿ ನಡೆಸಿರುವವರು ಕೇರಳದ ಮೂಲಭೂತವಾದಿಗಳ ಗುಂಪುಗಳಿಗೆ ಸೇರಿದವರೇ ಎಂದು ಪತ್ತೆಹಚ್ಚಲು ಸಮಗ್ರ ತನಿಖೆ ಅಗತ್ಯ ಎಂದು ಒತ್ತಾಯಿಸಿದ್ದಾರೆ. (ದಿಗ್ವಿಜಯ ನ್ಯೂಸ್)