ಜಿಲ್ಲೆ

ಅರ್ಚಕ ನಾರಾಯಣಾಚಾರ್‌ ಪುತ್ರಿಯರು ಹಿಂದೂಗಳಲ್ಲ: ಪರಿಹಾರದ ಚೆಕ್‌ನಿಂದ ಸತ್ಯ ಬಯಲು...!

suchetana

ಮಡಿಕೇರಿ: ಭೂಕುಸಿತದಿಂದ ಮೃತಪಟ್ಟ ತಲಕಾವೇರಿಯ ಅರ್ಚಕ ನಾರಾಯಣಾಚಾರ್‌ ಅವರ ಪುತ್ರಿಯರು ಸೇರಿದಂತೆ ಕುಟುಂಬಸ್ಥರಿಗೆ ಪರಿಹಾರ ನೀಡಿಕೆ ಕುರಿತಂತೆ ಇದೀಗ ಮತ್ತೊಂದು ವಿಷಯ ಭಾರಿ ಸುದ್ದಿ ಮಾಡುತ್ತಿದೆ.

ಈ ಹಿಂದೆ ಪರಿಹಾರಕ್ಕೆ ಸಂಬಂಧಿಸಿದ ಚೆಕ್‌ ತಮಗೇ ಸೇರಬೇಕು ಎಂದು ಗಲಾಟೆಯಾಗಿದ್ದ ಬೆನ್ನಲ್ಲೇ ನಾರಾಯಣಚಾರ್‌ ಅವರ ಇಬ್ಬರು ಪುತ್ರಿಯರಿಗೆ ಸರ್ಕಾರದಿಂದ ನೀಡಲಾಗಿದ್ದ ಚೆಕ್‌ ವಾಪಸ್‌ ಬಂದಿದೆ. ಇದಕ್ಕೆ ಕಾರಣ, ಹೆಸರಿನಲ್ಲಿ ಬದಲಾವಣೆ, ಈ ಹೆಸರಿನಲ್ಲಿ ಗೊಂದಲ ಆಗಲು ಕಾರಣ ಮತಾಂತರ!

ಹೌದು. ತಲಕಾವೇರಿಯ ಗಜಗಿರಿ ಭೂಕುಸಿತದಲ್ಲಿ ಮೃತಪಟ್ಟ ಅರ್ಚಕ ನಾರಾಯಣಾಚಾರ್‌ ಅವರ ಇಬ್ಬರೂ ಪುತ್ರಿಯರಿಗೆ ಆ.15ರಂದು ನೀಡಲಾಗಿದ್ದ ತಲಾ 2.5 ಲಕ್ಷ ಪರಿಹಾರ ಚೆಕ್‌ ಹೆಸರು ಸರಿಯಿಲ್ಲವೆಂದು ವಾಪಸ್‌ ಬಂದಿದೆ. ಏಕೆಂದರೆ ಅವರ ಮೂಲ ಹೆಸರಿನಲ್ಲಿ ಸರ್ಕಾರ ಪರಿಹಾರದ ಚೆಕ್‌ ನೀಡಿತ್ತು. ಆದರೆ ಅವರ ಹೆಸರು ಮತಾಂತರದಿಂದಾಗಿ ಬದಲಾವಣೆಯಾಗಿರುವುದು ಇದೀಗ ಬೆಳಕಿಗೆ ಬಂದಿದೆ.

ನಾರಾಯಣಾಚಾರ್‌ ಪುತ್ರಿಯರು ಅನ್ಯ ಧರ್ಮಕ್ಕೆ ಮತಾಂತರವಾದ ಹಿನ್ನೆಲೆಯಲ್ಲಿ ಹೆಸರು ಬದಲಾವಣೆಯಾಗಿದೆ. ವಿದೇಶದಿಂದ ಬಂದಿದ್ದ ಈ ಇಬ್ಬರು ಹೆಣ್ಣುಮಕ್ಕಳು ತಮ್ಮ ಪಾಲಕರು ನಾಪತ್ತೆಯಾಗಿರುವ ಬಗ್ಗೆ ಭಾಗಮಂಡಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದ ದೂರಿನಲ್ಲಿ ಶಾರದಾ ಆಚಾರ್‌, ನಮಿತಾ ಆಚಾರ್‌ ಎಂದು ನಮೂದಿಸಿದ್ದರು. ಅದೇ ಹೆಸರಿನಲ್ಲಿ ಸರ್ಕಾರ ಪರಿಹಾರ ಚೆಕ್‌ ವಿತರಣೆ ಮಾಡಿತ್ತು.

ಇದನ್ನೂ ಓದಿ: ಬೃಹತ್‌ ದಾಳಿಗೆ ಸ್ಕೆಚ್‌ ಹಾಕುತ್ತಿದ್ದನೇ ಈತ? ಬ್ಯಾಗ್‌ನಲ್ಲಿದ್ದ ಕೋಡ್‌ವರ್ಡ್ಸ್‌ ಏನು ಹೇಳುತ್ತಿವೆ?

ಆದರೆ ಮಕ್ಕಳ ಪೈಕಿ ಒಬ್ಬರ ಹೆಸರು ನಮಿತಾ ನಜೆರತ್‌ ಇನ್ನೊಬ್ಬರ ಹೆಸರು ಶೆನೋನ್‌ ಫರ್ನಾಂಡಿಸ್‌ ಆಗಿದ್ದು, ಅದೇ ಹೆಸರಿಗೆ ಚೆಕ್‌ ನೀಡುವಂತೆ ಇಬ್ಬರೂ ಮನವಿ ಮಾಡಿದ್ದಾರೆ.
ಚೆಕ್‌ ವಾಪಸ್‌ ನೀಡಿರುವುದು ಗಮನಕ್ಕೆ ಬಂದಿದೆ. ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ಚೆಕ್ಕನ್ನು ನಾರಾಯಣಾಚಾರ್‌ ಮಕ್ಕಳಿಗೆ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ತಿಳಿಸಿದರು.

ನಾರಾಯಣಾಚಾರ್‌ ಅಣ್ಣರಾದ ಆನಂದ ತೀರ್ಥರು ಬ್ರಹ್ಮಚಾರಿ ಆಗಿದ್ದರಿಂದ ಅವರ ಪರಿಹಾರದ ಹಣವನ್ನು ಸಹೋದರಿ ಸುಶೀಲಾರಿಗೆ ನೀಡಲಾಗಿತ್ತು. ಹಾಗೆಯೇ ನಾರಾಯಣಾಚಾರ್‌ ಇಬ್ಬರು ಹೆಣ್ಣು ಮಕ್ಕಳಿಗೆ ಶನಿವಾರ ತಲಾ 2.5 ಲಕ್ಷ ರು. ಪರಿಹಾರ ಚೆಕ್‌ ವಿತರಿಸಲಾಗಿತ್ತು. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ನಾರಾಯಣಾಚಾರ್‌ ಮಕ್ಕಳು ಆನಂದ ತೀರ್ಥ ಅವರನ್ನು ನಾವೇ ನೋಡಿಕೊಂಡಿದ್ದೆವು. ಹೀಗಾಗಿ ಸುಶೀಲಾರಿಗೆ ಪರಿಹಾರದ ಚೆಕ್‌ ನೀಡಿದ್ದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದು ಇಲ್ಲಿ ಉಲ್ಲೇಖಾರ್ಹ.