ಜಿಲ್ಲೆ

ಚಲಿಸುತ್ತಿದ್ದ ರೈಲಿನಿಂದ ಬಿದ್ದಾಕೆ ಸ್ವಲ್ಪದರಲ್ಲೇ ಬಚಾವ್​; 'ತ್ರಿಮೂರ್ತಿ'ಗಳಂತೆ ಧಾವಿಸಿ ರಕ್ಷಿಸಿದ ರೈಲ್ವೆ ಪೊಲೀಸರು

ಶಿವಮೊಗ್ಗ: ಆ 'ತ್ರಿಮೂರ್ತಿ'ಗಳು ಇರದೇ ಹೋಗಿದ್ದರೆ ಬಹುಶಃ ಈ ಮಹಿಳೆ ಬದುಕುಳಿಯುವ ಸಾಧ್ಯತೆಯೇ ಇರುತ್ತಿರಲಿಲ್ವೇನೋ!?ಚಲಿಸುತ್ತಿದ್ದ ರೈಲಿನಿಂದ ಬಿದ್ದು ಇನ್ನೇನು ಅಡಿಗೆ ಸಿಲುಕಿಯೇ ಬಿಟ್ರೇನೋ ಎಂಬಷ್ಟರಲ್ಲಿ ಆಕೆಯನ್ನು ರಕ್ಷಿಸಿದ ಆ ಮೂವರು ರೈಲ್ವೆ ಪೊಲೀಸರು ಅವರ ಪಾಲಿಗೆ ಬ್ರಹ್ಮ, ವಿಷ್ಣು, ಮಹೇಶ್ವರರಂತೆ ಧಾವಿಸಿದ್ದರು ಎಂದರೂ ಅತಿಶಯೋಕ್ತಿಯೇನಲ್ಲ.

ಆ ಮೂವರ ಪೈಕಿ ಒಬ್ಬರೇ ಒಬ್ಬರ ಪ್ರಯತ್ನ ಮಿಸ್​ ಆಗಿದ್ದರೂ ಈ ಮಹಿಳೆ ಪ್ರಾಣ ಇಲ್ಲವೇ ಕೈಕಾಲು ಕಳೆದುಕೊಳ್ಳುವಂಥ ದುರಂತ ಸಂಭವಿಸಿರುತ್ತಿತ್ತು. ಶಿವಮೊಗ್ಗ ತಾಳಗುಪ್ಪ ಎಕ್ಸ್​ಪ್ರೆಸ್​ 06530 ರೈಲಿನಲ್ಲಿ ಸಂಬಂಧಿಕರನ್ನು ನೋಡಲು ಬಂದಿದ್ದ 50 ವರ್ಷದ ಮಹಿಳೆಯೇ ಪ್ರಾಣಾಪಾಯಕ್ಕೆ ಸಿಲುಕಿ ಬದುಕುಳಿದ ಈ ಅದೃಷ್ಟವಂತೆ.

ರೈಲು ಬರುವ ಸಂದರ್ಭದಲ್ಲಿ ಶಿವಮೊಗ್ಗ ರೈಲ್ವೆ ಸ್ಟೇಷನ್​ನಲ್ಲಿ ಆರ್​ಪಿಎಫ್​ ಜಗದೀಶ್ ಹಾಗೂ ಜಿಆರ್​ಪಿ ಸಿಬ್ಬಂದಿ ಅಣ್ಣಪ್ಪ ಮತ್ತು ಸಂತೋಷ್ ಗಸ್ತಿನಲ್ಲಿದ್ದರು. ರೈಲು ಪೂರ್ತಿ ನಿಲ್ಲುವ ಮೊದಲೇ 50 ವರ್ಷದ ಮಹಿಳೆಯೊಬ್ಬರು ಇಳಿಯಲು ಮುಂದಾಗಿದ್ದು, ರೈಲು ಚಲಿಸುತ್ತಿರುವಾಗಲೇ ವ್ಯಕ್ತಿಯೊಬ್ಬರು ಆಕೆಯನ್ನು ಇಳಿಸಿದ್ದರು.

ಇನ್ನೇನು ಇಳಿಯಬೇಕು ಎನ್ನುವಷ್ಟರಲ್ಲಿ ಮಹಿಳೆ ಆಯತಪ್ಪಿದ್ದು, ತಕ್ಷಣ ಅದನ್ನು ನೋಡಿದ ಜಗದೀಶ್​ ಹಿಡಿಯಲು ಯತ್ನಿಸಿದರೂ ಪೂರ್ತಿಯಾಗಿ ಹಿಡಿತ ಸಿಗದೆ ಮಹಿಳೆ ಪ್ಲ್ಯಾಟ್​ಪಾರ್ಮ್​ ಅಂಚಿನಲ್ಲೇ ರೈಲಿಗೆ ತಾಗಿಗೊಂಡಂತೆ ಬಿದ್ದರು. ಅದೇ ಸಮಯಕ್ಕೆ ಅಣ್ಣಪ್ಪ ಮತ್ತು ಸಂತೋಷ್​ ಕೂಡ ರಕ್ಷಣೆಗೆ ಧಾವಿಸಿದರೂ ಒಬ್ಬರ ಹಿಡಿತ ತಪ್ಪಿತು, ಮತ್ತೊಬ್ಬರು ಹಿಡಿದು ಬಚಾವ್ ಮಾಡಿದರು. ಒಟ್ಟಿನಲ್ಲಿ ಮೂವರಲ್ಲಿ ಯಾರಾದರೂ ಒಬ್ಬರ ಪ್ರಯತ್ನ ಇರದಿದ್ದರೂ ಆ ಮಹಿಳೆ ಪ್ರಾಣಾಪಾಯಕ್ಕೆ ಸಿಲುಕಿಬಿಟ್ಟಿರುತ್ತಿದ್ದರು. ಈ ದೃಶ್ಯ ರೈಲ್ವೆ ಸ್ಟೇಷನ್​ನಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.