ಜಿಲ್ಲೆ

ಹಗಲಲ್ಲಿ ಬಂದಿದ್ದರೇ ಅವರನ್ನ ಕನ್ನಡಿಗರು ಚಿಂದಿ ಮಾಡಿಬಿಡ್ತಿದ್ರು: ಎಂಇಎಸ್​ ವಿರುದ್ಧ ಸಚಿವ ಈಶ್ವರಪ್ಪ ಆಕ್ರೋಶ

ಬೆಳಗಾವಿ: ಎಂಇಎಸ್ ಹೆಸರನ್ನು ಇಟ್ಟುಕೊಂಡು ಮಹಾರಾಷ್ಟ್ರದ ಹೇಡಿ ಸಮಿತಿ, ಹೇಡಿತನ ಪ್ರದರ್ಶಿಸುತ್ತಿದೆ. ರಾತ್ರೋರಾತ್ರಿ ಬಂದು ರಾಯಣ್ಣನ ಮೂರ್ತಿ ವಿರೂಪಗೊಳ್ಳಿಸಿದ್ದನ್ನು ವಿಧಾನ ಸಭೆಯಲ್ಲಿ ಎಲ್ಲರೂ ಖಂಡನೆ ಮಾಡಿದ್ದಾರೆ. ಹಗಲು ಹೊತ್ತು ಬಂದಿದ್ದರೇ ಕನ್ನಡಿಗರು ಚಿಂದಿ, ಚಿಂದಿ ಮಾಡಿ ಬಿಡುತ್ತಿದ್ದರು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಆನಗೋಳದಲ್ಲಿ ಮರುಸ್ಥಾಪನೆಗೊಂಡ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸುದ್ದಿಗಾರರ ಜತೆ ಮಾತನಾಡಿದ ಅವರು, ಎಂಇಎಸ್ ನಿಷೇಧಿಸುವ ಚಿಂತನೆ ನಡೆದಿದ್ದು, ಅದರ ಎಲ್ಲ ಕೃತ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಕಳುಹಿಸಿ ಕೊಡಲಾಗುವುದು ಎಂದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ ಮಹಾರಾಜರ ಸ್ವರಾಜ್ಯದ ಸಂಕಲ್ಪ ಹಾಗೂ ವಿಶ್ವಗುರು ಬಸವಣ್ಣನವರ ಮಹತ್ವ ಇನ್ನೂ ಬಹಳ ಜನರಿಗೆ ಗೊತ್ತಿಲ್ಲ. ಅಂಥವರಿಂದ ರಾಜ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ತರಲು ಪ್ರಯತ್ನ ನಡೆಸಿದ್ದು, ಅಂಥವರನ್ನು ಆರೂವರೆ ಕೋಟಿ ಕನ್ನಡಿಗರು ಬಿಡುವುದಿಲ್ಲ. ಸರ್ಕಾರ ಅವರನ್ನು ಮಟ್ಟ ಹಾಕುವ ಕೆಲಸ ಮಾಡುತ್ತದೆ. ಇದರ ಹಿಂದೆ ಯಾವ ಸಂಘಟನೆ, ಅಥವಾ ರಾಜಕೀಯ ಪಕ್ಷ ಇದೆ ಎಂಬುದು ತನಿಖೆಯಿಂದ ಹೊರಬರುತ್ತದೆ.

ಹೆಬ್ಬಾಳ್ಕರ್ ಸಂತೃಪ್ತಿಗೆ ಡಿಕೆಶಿಯಿಂದ ಪುಂಡರ ಪರ ಹೇಳಿಕೆ

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಂತೃಪ್ತಿ ಪಡಿಸುವುದಕ್ಕಾಗಿ ಹಾಗೂ ಬೆಳೆಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಮರಾಠಿಗರ ಮತ ಪಡೆಯುವುದಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಎಂಇಎಸ್ ಪುಂಡರ ಪರ ಹೇಳಿಕೆ ನೀಡುತ್ತಿದ್ದಾರೆ. ಎಂಇಎಸ್ ಕೃತ್ಯ ಖಂಡಿಸಿ ಇಡೀ ರಾಜ್ಯವೇ ಒಂದಾಗಿರುವಾಗ, ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪುಂಡ ಎಂಇಎಸ್ ಸಂಘಟನೆಯನ್ನು ನಿಷೇಧ ಮಾಡಬೇಕೆಂದು ಆಗ್ರಹಿಸಿದ್ದಾರೆ. ಇನ್ನೊಂದೆಡೆ ಎಂಇಎಸ್‌ಗೂ ಇದಕ್ಕೂ ಸಂಬಂಧ ಇಲ್ಲ, ಬೇರೆ ಯಾರೋ ಪುಂಡರ ಕೃತ್ಯ ಇದೆ ಎನ್ನುತ್ತಿರುವ ಡಿ.ಕೆ.ಶಿವಕುಮಾರ ಅವರು ಪಕ್ಷದಂತೆ ರಾಜ್ಯದ ಜನತೆಯಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಇದನ್ನು ಸರಿಪಡಿಸಿಕೊಳ್ಳಬೇಕು ಎಂದು ಸಚಿವ ಈಶ್ವರಪ್ಪ ಹೇಳಿದರು.

ಆನಗೋಳದಲ್ಲಿ ಮರುಸ್ಥಾಪನೆಗೊಮಡ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಸಚಿವ ಕೆ.ಎಸ್.ಈಶ್ವರಪ್ಪ ಮಾಲಾರ್ಪಣೆ ಮಾಡಿದರು.