ಜಿಲ್ಲೆ

ಅನಂತರಾಜು ಆತ್ಮಹತ್ಯೆ ಕೇಸ್​ಗೆ ಮತ್ತೊಂದು ತಿರುವು: ಪೊಲೀಸರಿಗೆ ಡೆತ್​ನೋಟ್ ತಂದು ಕೊಟ್ಟ ಸುಮಾ

ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣದಲ್ಲಿ ದಿನಕ್ಕೊಂದು ಸಂಗತಿಗಳ ಬೆಳಕಿಗೆ ಬರುತ್ತಿವೆ. ಅನಂತರಾಜು ಪತ್ನಿ ಸುಮಾ ಹಾಗೂ ರೇಖಾ ನಡುವೆ ನಡೆದಿದ್ದ ನಾಲ್ಕೈದು ಆಡಿಯೋ ರೆಕಾರ್ಡ್​ಗಳು ಈ ಹಿಂದೆ ಸೋರಿಕೆಯಾಗಿತ್ತು. ಆಡಿಯೋದಲ್ಲಿ ಅನಂತರಾಜು ಡೆತ್​ನೋಟ್​ ಬರೆದಿಟ್ಟಿದ್ದಾರೆ ಎಂದು ಸುಮಾ ಹೇಳಿದ್ದರು. ಇದೀಗ ಆ ಡೆತ್​ನೋಟ್ ಮಾಧ್ಯಮಳಿಗೆ ಲಭ್ಯವಾಗಿದೆ. ​

ಒಂದು ಡೆತ್​ನೋಟ್​ನಲ್ಲಿ ಪತ್ನಿ ಸುಮಾ ಉದ್ದೇಶಿಸಿ ಬರೆಯಲಾಗಿದೆ. ಮತ್ತೊಂದರಲ್ಲಿ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ಗೆ ಬರೆಯಲಾಗಿದ್ದು, ಆ ಎರಡು ಡೆತ್​ನೋಟ್​ಗಳ ಸಾರಾಂಶ ಈ ಕೆಳಕಂಡಂತಿದೆ.

ಪ್ರಿಯ ಸುಮಾ, ಕ್ಷಮಿಸಿಬಿಡು ನಿನಗೆ ಮೋಸ ಮಾಡಿದ್ದೇನೆ. ನಿನ್ನಿಂದ ಕ್ಷಮೆ ಕೇಳಲು ನಾನು ಅರ್ಹನಲ್ಲ. ರೇಖಾ ಎಂಬ ಕೆ.ಆರ್.ಪುರ ಹೆಣ್ಣಿನ ಸಹವಾಸ ಮಾಡಿ ಅವಳಿಂದ ಫೋಟೋ ವಿಡಿಯೋಗಳ ಟ್ರ್ಯಾಪ್​​ಗೆ ಸಿಲುಕಿ, ಬ್ಲಾಕ್​ಮೇಲ್ ಮಾಡಿಸಿಕೊಂಡು ನಿನಗೆ ಮುಖ ತೋರಿಸಲು ಸಾಧ್ಯವಾಗ್ತಿಲ್ಲ. ತೃಪ್ತಿ, ತನ್ಮಯಿ ಹಾಗೂ ಅಭಯರನ್ನು ಚೆನ್ನಾಗಿ ನೋಡಿಕೋ ಎಂದು ಸುಮಾ ಉದ್ದೇಶಿಸಿ ಬರೆಯಲಾಗಿದೆ.

ಇನ್ನೊಂದು ಡೆತ್​ನೋಟ್​ನಲ್ಲಿ ಪೊಲೀಸ್ ಇನ್ಸ್​ಪೆಕ್ಟರ್​ ಅವರಿಗೆ ಕೆ.ಆರ್.ಪುರದ ರೇಖಾ ಎಂಬ ಹೆಣ್ಣಿನ ಮೋಸದ ಜಾಲಕ್ಕೆ ಸಿಲುಕಿ ಎಲ್ಲವನ್ನು ಕಳೆದುಕೊಂಡಿದ್ದೇನೆ. ಸಾಕಷ್ಟು ಹಣ ನೀಡಿದ್ದೇನೆ. ಅವಳಿಂದ ಮಾನಸಿಕ ಹಿಂಸೆ ಅನುಭವಿಸಿದ್ದೇನೆ. ಅವಳ ವಿರುದ್ಧ ಕಾನೂನು ಕ್ರಮ ವಹಿಸಬೇಕೆಂದು ಕೇಳಿಕೊಳ್ಳುತ್ತೇನೆ. ಇಂತಿ ನಿಮ್ಮ ಅನಂತರಾಜು ಎಂದು ಬರೆಯಲಾಗಿದೆ.

ಸದ್ಯ ಡೆತ್​ನೋಟ್ ಅನ್ನು ಬ್ಯಾಡರಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ಡೆತ್​ನೋಟ್ ಎಂದು ಅನಂತರಾಜು ಪತ್ನಿ ಸುಮಾ ಪೊಲೀಸರಿಗೆ ನೀಡಿದ್ದಾರೆ. ಆದರೆ, ಡೆತ್​ನೋಟ್ ಬರೆದಿರುವುದು ಅನಂತರಾಜುನಾ? ಅಥವಾ ಬೇರೆಯವರಾ? ಎಂದು ಎಫ್ಎಸ್​ಎಲ್​ ಪರೀಕ್ಷೆಗೆ ಪೊಲೀಸರು ಕಳುಹಿಸಲಿದ್ದಾರೆ.

ಈ ಹಿಂದೆ ಫೋನ್ ಕಾಲ್​ನಲ್ಲಿ ಮಾತನಾಡುವಾಗ ರೇಖಾಗೆ ಸುಮಾರ ಅವಾಜ್ ಹಾಕಿದ್ದಳು. ನಿನ್ನ ಮೇಲೆ ಬರೆದಿರುವ ಡೆತ್ ನೋಟ್ ಇದೆ. ಅದನ್ನು ಕೊಟ್ಟು ನಿನ್ನನ್ನು ಜೈಲಿಗೆ ಹಾಕಿಸುತ್ತೆನೆ ಎಂದಿದ್ದರು. ಹೀಗಾಗಿ ಈ ಡೆತ್​ನೋಟ್ ಯಾವ ಸಂದರ್ಭದಲ್ಲಿ ಬರೆದಿದ್ದು ಎಂದು ಬ್ಯಾಡರಹಳ್ಳಿ ಪೊಲೀಸರು ತನಿಖೆ ನಡೆಸಲಿದ್ದಾರೆ. (ದಿಗ್ವಿಜಯ ನ್ಯೂಸ್​)